ದೇಶ

ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಶಸ್ತ್ರಸಜ್ಜಿತ ದುಷ್ಕರ್ಮಿಗಳು-ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ, ಇಬ್ಬರು ಯೋಧರಿಗೆ ಗಾಯ

Manjula VN

ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಮತ್ತು ಶಂಕಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳ ನಡುವೆ ಮತ್ತೆ ಘರ್ಷಣೆ ನಡೆದಿದೆ.

ಶಸ್ತ್ರಸಜ್ಜಿತ ದುಷ್ಕರ್ಮಿಗಳು-ಭದ್ರತಾ ಪಡೆಗಳ ನಡುವೆ ನಿನ್ನೆ ಬೆಳಿಗ್ಗೆಯಿಂದ ಆರಂಭವಾಗ ಗುಂಡಿನ ದಾಳಿ, ತಡರಾತ್ರಿವರೆಗೂ ಮುಂದುವರೆದಿತ್ತು. ಈ ವೇಳೆ ಇಬ್ಬರು ಯೋಧರು ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರದ ಇಂಫಾಲ್‌ನಿಂದ 50 ಕಿಮೀ ದೂರದಲ್ಲಿರುವ ಫೌಬಕ್‌ಚಾವೊ ಇಖೈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ತಡರಾತ್ರಿಯವರೆಗೆ ಸುಮಾರು 15 ಗಂಟೆಗಳ ಕಾಲ ಮುಂದುವರೆದಿತ್ತು. ಈ ವೇಳೆ ತೇರಾ ಖೊಂಗ್ಸಾಂಗ್ಬಿಯಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿರುವುದು ವರದಿಯಾಗಿದೆ.

ಈ ನಡುವೆ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿರುವ ಯೋಧನನ್ನು 40 ವರ್ಷದ ನಮೀರಕ್ಪಾಮ್ ಇಬೊಮ್ಚಾ ಎಂದು ಗುರುತಿಸಲಾಗಿದೆ. ಮತ್ತೋರ್ವ ಯೋಧ ಕುಮಾನ್ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆಂದು ತಿಳಿದುಬಂದಿದೆ.

ಗುಂಡಿನ ಚಕಮಕಿ ವೇಳೆ ಶಸ್ತ್ರ ಸಜ್ಜಿತ ವ್ಯಕ್ತಿಗಳು ಗಾಯಗೊಂಡಿದ್ದಾರೆಯೇ ಅಥವಾ ಹತ್ಯೆಗೀಡಾಗಿದ್ದಾರೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂರು ತಿಂಗಳಿಂದಲೂ ಮಣಿಪುರದಲ್ಲಿ ಕುಕಿ ಮತ್ತು ಮೈಟೆಯಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರ ನಡೆಯುತ್ತಲೇ ಇದೆ. ಹಿಂಸಾಚಾರದಲ್ಲಿ ಈ ವರೆಗೂ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

SCROLL FOR NEXT