ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಮತ್ತು ಮೇ 4 ರಂದು ನಡೆದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಮತ್ತು ಮಣಿಪುರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ "ಭಯಾನಕ" ಎಂದು ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಪೊಲೀಸರು ಏನು ಮಾಡುತ್ತಿದ್ದರು?, ಎಫ್‌ಐಆರ್‌ಗೆ ಸಂಬಂಧಿಸಿದಂತೆ ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ವಾಸ್ತವಿಕವಾಗಿ ಪೊಲೀಸರೇ ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಒಪ್ಪಿಸಿರುವುದರಿಂದ ರಾಜ್ಯ ಪೊಲೀಸರು ಈ ವಿಷಯವನ್ನು ತನಿಖೆ ಮಾಡಲು ಬಯಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕಿಡಿ ಕಾರಿದೆ.
ಹಿಂಸಾಚಾರ ಪೀಡಿತ ರಾಜ್ಯದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ನಾಳೆ ಕೇಂದ್ರ ಮತ್ತು ಮಣಿಪುರವನ್ನು ಪ್ರತಿನಿಧಿಸುವ ಕಾನೂನು ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ಅಥವಾ ಮಾಜಿ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ರಚಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನು ಓದಿ: ಮಣಿಪುರ ಸಂಬಂಧ ಪ್ರತಿಭಟನೆ: ಲೋಕಸಭೆ ನಾಳೆಗೆ ಮುಂದೂಡಿಕೆ; ಪೈರಸಿ ತಡೆಯುವ ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ ಅಂಗೀಕಾರ
ವೈರಲ್ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ಮಣಿಪುರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, “ಮೇ 4 ರಂದು ನಡೆದ ಭಯಾನಕ ಘಟನೆಯ ಬಗ್ಗೆ ತಕ್ಷಣ ಎಫ್‌ಐಆರ್ ಏಕೆ ದಾಖಲಿಸಲಿಲ್ಲ ಮತ್ತು ಎಫ್‌ಐಆರ್ ದಾಖಲಿಸಲು ರಾಜ್ಯ ಪೊಲೀಸರಿಗೆ 14 ದಿನಗಳು ಏಕೆ ಬೇಕಾಯಿತು? ಎಂದು ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ವಿಡಿಯೋದಲ್ಲಿ ತೋರಿಸಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಘಟನೆಯು ಪ್ರತ್ಯೇಕ ಘಟನೆಯಲ್ಲ ಮತ್ತು ಅಂತಹ ಹಲವಾರು ಘಟನೆಗಳು ನಡೆದಿರಬಹು ಎಂದು ಊಹಿಸಿದೆ.
ಮೇ 4ರಂದು ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 18 ರಂದು ಎಫ್ಐಆರ್ ದಾಖಲಾಗಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕವಷ್ಟೇ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಅಪ್ರಾಪ್ತ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ.