ದೇಶ

Chennai Egmore Express ರೈಲಿನ ಕೋಚ್‌ನಲ್ಲಿ ಬಿರುಕು: ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಮತ್ತೊಂದು ರೈಲು ದುರಂತ

Srinivasamurthy VN

ಚೆನ್ನೈ: 275 ಮಂದಿಯ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತ ಹಸಿರಾಗಿರುವಂತೆಯೇ ಇಂತಹುದೇ ಸಂಭಾವ್ಯ ದುರಂತವೊಂದು ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದೆ.

ಹೌದು.. ತಮಿಳುನಾಡಿನಲ್ಲಿ ಈ ಘಟನೆ ವರದಿಯಾಗಿದ್ದು, ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸಂಭವನೀಯ ರೈಲು ದುರಂತವನ್ನು ತಪ್ಪಿಸಲಾಗಿದೆ. ನಿನ್ನೆ ಮಧ್ಯಾಹ್ನ 3:36 ಕ್ಕೆ ತಮಿಳುನಾಡಿನ ಸೆಂಗೊಟ್ಟೈ ನಿಲ್ದಾಣವನ್ನು ಪ್ರವೇಶಿಸುವಾಗ ರೈಲು ಸಂಖ್ಯೆ 16102 (ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್) ನ ಎಸ್ 3 ಕೋಚ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಸಿ&ಡಬ್ಲ್ಯೂ ಸಿಬ್ಬಂದಿ ಸುರಕ್ಷಾ ಶೋಧ ನಡೆಸುತ್ತಿದ್ದಾಗ ಕೋಚ್ ನಲ್ಲಿ ಬಿರುಕು ಕಾಣಿಸಿಕೊಂಡಿರುವುದು ಕಂಡುಬಂದಿದೆ.

ವಿಚಾರ ತಿಳಿದ ಕೂಡಲೇ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಲೋಪವಿರುವ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಿ ಅದರಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗಳಿಗೆ ಸ್ಥಳಾಂತರಿಸಿದ್ದಾರೆ. ಸಂಪೂರ್ಣ ಸುರಕ್ಷತಾ ಪರೀಕ್ಷೆಗಳ ಬಳಿಕ ರೈಲು ಸಂಜೆ 4:40 ಕ್ಕೆ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಬಿರುಕು ಪತ್ತೆ ಮಾಡಿದ ಸಿಬ್ಬಂದಿಯನ್ನು ಪ್ರಶಂಸಿದ ದಕ್ಷಿಣ ರೈಲ್ವೆ ಅಧಿಕಾರಿಗಳು, ಇಂದು ಮಧುರೈ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಅವರಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

3 ದಿನಗಳ ಹಿಂದಷ್ಟೇ ಇದೇ ಒಡಿಶಾದ ಬಾಲಾಸೋರ್ ನಲ್ಲಿ ಮೂರು ರೈಲುಗಳ ಅಪಘಾತವಾಗಿ 275 ಮಂದಿ ಸಾವಿಗೀಡಾಗಿ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೊದಲು ರೈಲೊಂದು ಹಳಿ ತಪ್ಪಿ, ಬಳಿಕ ಅದಕ್ಕೆ ಗೂಡ್ಸ್ ರೈಲು ಮತ್ತು ಪ್ಯಾಸೆಂಜರ್ ರೈಲು ಢಿಕ್ಕಿಯಾಗಿ ಇತಿಹಾಸದ ಭೀಕರ ರೈಲು ದುರಂತ ಸಂಭವಿಸಿತ್ತು.

SCROLL FOR NEXT