ದೇಶ

ಬ್ರಿಜ್ ಭೂಷಣ್ ಮನೆಗೆ ದೆಹಲಿ ಪೊಲೀಸರ ಭೇಟಿ; ಸಹಚರರು, ಮನೆಗೆಲಸದವರ ಹೇಳಿಕೆ ದಾಖಲು

Lingaraj Badiger

ನವದೆಹಲಿ: ನಿರ್ಗಮಿತ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ತನಿಖೆಯ ಭಾಗವಾಗಿ ದೆಹಲಿ ಪೊಲೀಸರು, ಉತ್ತರ ಪ್ರದೇಶದ ಗೊಂಡಾದಲ್ಲಿರುವ ಬಿಜೆಪಿ ಸಂಸದರ ಮನೆಗೆ ಭೇಟಿ ನೀಡಿ, ಅವರ ಸಹಚರರ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಸಿಂಗ್ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 164 ರ ಅಡಿಯಲ್ಲಿ ಹೊಸ ಹೇಳಿಕೆ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸಂಸದರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಅದರಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ದೆಹಲಿ ಪೊಲೀಸರ ತಂಡವು ಗೊಂಡಾಗೆ ಭೇಟಿ ನೀಡಿದ್ದು, ಸಿಂಗ್ ಅವರ ಸಹಚರರು ಮತ್ತು ಅವರ ಚಾಲಕ ಸೇರಿದಂತೆ ಅವರ ಮನೆಗೆಲಸದವರ ಹೇಳಿಕೆ ದಾಖಲಿಸಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಹೆಚ್ಚಿನ ತನಿಖೆಯ ಭಾಗವಾಗಿ ಇದನ್ನು ಮಾಡಲಾಗುತ್ತಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಪ್ರಕರಣವು ತುಂಬಾ ಸೂಕ್ಷ್ಮವಾಗಿರುವುದರಿಂದ, ನಾವು ಅದರ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.

SCROLL FOR NEXT