ದೇಶ

ಅಮೃತಸರ: ಪಾಕ್ ಡ್ರೋನ್‌ನಿಂದ ಬೀಳಿಸಿದ 5 ಕೆಜಿ ತೂಕದ ಹೆರಾಯಿನ್ ವಶಪಡಿಸಿಕೊಂಡ ಬಿಎಸ್‌ಎಫ್

Ramyashree GN

ಅಮೃತಸರ: ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿರುವ ರಾಯ್ ಗ್ರಾಮದ ಬಳಿಯ ಅಂತರರಾಷ್ಟ್ರೀಯ ಗಡಿಯ ಬಳಿ ಡ್ರೋನ್‌ನಿಂದ ಬೀಳಿಸಿದ 5 ಕೆಜಿಗೂ ಹೆಚ್ಚು ತೂಕದ ಮಾದಕ ದ್ರವ್ಯವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶುಕ್ರವಾರ ವಶಪಡಿಸಿಕೊಂಡಿದೆ.

ಡ್ರೋನ್ ಝೇಂಕರಿಸುವ ಮತ್ತು ಏನನ್ನೋ ಬೀಳಿಸುವ ಶಬ್ದವನ್ನು ಆಲಿಸಿದ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಮೃತಸರ ಜಿಲ್ಲೆಯ ರಾಯ್ ಗ್ರಾಮದ ಬಳಿ 5.260 ಕೆಜಿ ಹೆರಾಯಿನ್ ಹೊಂದಿರುವ 1 ದೊಡ್ಡ ಪ್ಯಾಕೆಟ್ ಅನ್ನು ವಶಪಡಿಸಿಕೊಂಡಿವೆ ಎಂದು ಬಿಎಸ್ಎಫ್ ಟ್ವೀಟ್ ಮಾಡಿದೆ.

ಪೊಲೀಸರೊಂದಿಗೆ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಬಿಎಸ್ಎಫ್ ಪಡೆಗಳಿಗೆ ಅಮೃತಸರದ ಕಕ್ಕರ್ ಗ್ರಾಮದ ಹೊರವಲಯದಲ್ಲಿರುವ ಕೃಷಿಭೂಮಿಯಿಂದ ಹಳದಿ ಬಣ್ಣದ ಅಂಟಿಕೊಳ್ಳುವ ಟೇಪ್‌ನಿಂದ ಸುತ್ತಿದ್ದ ದೊಡ್ಡ ಪ್ಯಾಕೆಟ್ ಸಿಕ್ಕಿದೆ. ಹಸಿರು ಬಣ್ಣದ ನೈಲಾನ್ ಹಗ್ಗ ಮತ್ತು ಪ್ಯಾಕೆಟ್‌ಗೆ ಜೋಡಿಸಲಾದ ಕೊಕ್ಕೆ ಸಹ ಪತ್ತೆಯಾಗಿದೆ ಎಂದು ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ಹೇಳಿಕೆಯಲ್ಲಿ ತಿಳಿಸಿದೆ.

ದೊಡ್ಡ ಪ್ಯಾಕೆಟ್ ಅನ್ನು ತೆರೆದಾಗ ಅದರಲ್ಲಿ 5.26 ಕಿಲೋಗ್ರಾಂ ತೂಕದ ಐದು ಹೆರಾಯಿನ್ ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ಬಿಎಸ್‌ಎಫ್ ತಿಳಿಸಿದೆ.

ಅಮೃತಸರ ಸೆಕ್ಟರ್‌ನಲ್ಲಿ ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರ ಸಮಯೋಚಿತ ಜಂಟಿ ಪ್ರಯತ್ನಗಳಿಂದ ನಿಷಿದ್ಧ ವಸ್ತುಗಳ ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಮತ್ತೊಂದು ದುಷ್ಕೃತ್ಯದ ಪ್ರಯತ್ನ ವಿಫಲವಾಗಿದೆ ಎಂದು ಬಿಎಸ್‌ಎಫ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಬುಧವಾರ ಮುಂಜಾನೆ, ಅಮೃತಸರ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ. ಅಮೃತಸರ ಜಿಲ್ಲೆಯ ಭೈನಿ ರಜಪೂತಾನ ಗ್ರಾಮದ ಬಳಿ ಬಿಎಸ್ಎಫ್ ಪಡೆಗಳು ಪಾಕಿಸ್ತಾನದ ಡ್ರೋನ್‌ ಅನ್ನು ಹೊಡೆದುರುಳಿಸಿವೆ. 

SCROLL FOR NEXT