ದೇಶ

ಮಹಿಳಾ ಕುಸ್ತಿಪಟುವನ್ನು WFI ಅಧ್ಯಕ್ಷರ ಕಚೇರಿಗೆ ಕರೆದೊಯ್ದ ಪೊಲೀಸರು

Lingaraj Badiger

ನವದೆಹಲಿ: ಬಿಜೆಪಿ ಸಂಸದ ಹಾಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಶುಕ್ರವಾರ ಮಹಿಳಾ ಕುಸ್ತಿಪಟುವನ್ನು ದೆಹಲಿಯಲ್ಲಿರುವ ಅವರ ಕಚೇರಿಗೆ ಕರೆದೊಯ್ದು ಅಪರಾಧಕ್ಕೆ ಕಾರಣವಾದ ಘಟನೆಗಳ ಮರುಸೃಷ್ಟಿಸಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಅಧಿಕೃತ ನಿವಾಸ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಕಚೇರಿಯಾಗಿದೆ.

ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಮಹಿಳಾ ಕುಸ್ತಿಪಟುವನ್ನು ಇಂದು ಮಧ್ಯಾಹ್ನ 1.30ಕ್ಕೆ ಡಬ್ಲ್ಯುಎಫ್‌ಐ ಕಚೇರಿಗೆ ಕರೆದೊಯ್ಯಲಾಯಿತು ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಅಲ್ಲಿದ್ದರು. ದೃಶ್ಯವನ್ನು ಮರುಸೃಷ್ಟಿಸಲು ಮತ್ತು ಕಿರುಕುಳ ನೀಡಿದ ಸ್ಥಳಗಳನ್ನು ನೆನಪಿಸಿಕೊಳ್ಳುವಂತೆ ಮಹಿಳಾ ಪೊಲೀಸರು ಕುಸ್ತಿಪಟುವಿಗೆ ಸೂಚಿಸಿದರು" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪೊಲೀಸರು ಸ್ಥಳದಿಂದ ತೆರಳಿದ ಕೆಲವೇ ಗಂಟೆಗಳ ನಂತರ, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಇತರ ಕುಸ್ತಿಪಟುಗಳು ರಾಜಿ ಮಾಡಿಕೊಳ್ಳಲು ಡಬ್ಲ್ಯುಎಫ್‌ಐ ಕಚೇರಿ ಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಅದು ಸುಳ್ಳು ಎಂದು ಪೊಲೀಸರು ಹೇಳಿದ್ದಾರೆ.

ಜೂನ್ 15 ರೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಭರವಸೆ ನೀಡಿದ ನಂತರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

SCROLL FOR NEXT