ದೇಶ

ಸೆಂಥಿಲ್ ಬಾಲಾಜಿಯ ಭ್ರಷ್ಟಾಚಾರ, ಭೂಕಬಳಿಕೆ ಟೀಕಿಸಿದ್ದ ಸ್ಟ್ಯಾಲಿನ್ ಹಳೆಯ ವೀಡಿಯೋ ವೈರಲ್!

Srinivas Rao BV

ಚೆನ್ನೈ: ಈಗ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ತಮಿಳುನಾಡು ಸರ್ಕಾರದ ಸಚಿವ ಸೆಂಥಿಲ್ ಬಾಲಾಜಿ, ಈ ಹಿಂದೆ ಎಐಎಡಿಎಂಕೆ ಸರ್ಕಾರದಲ್ಲಿ ಸೆಂಥಿಲ್ ಬಾಲಾಜಿ ಸಚಿವರಾಗಿದ್ದಾಗ ಸ್ಟ್ಯಾಲಿನ್ ವಾಗ್ದಾಳಿ ನಡೆಸಿದ್ದ ಹಳೆಯ ವೀಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.

ಸೆಂಥಿಲ್ ಬಾಲಾಜಿ ವಿರುದ್ಧ ಕೇಳಿಬಂದಿದ್ದ ಉದ್ಯೋಗಕ್ಕಾಗಿ ಹಣ ಹಗರಣದ ಬಗ್ಗೆ ಕೆಲವು ವರ್ಷದ ಹಿಂದೆ ಶ್ರೀ ಸ್ಟ್ಯಾಲಿನ್ ಅವರು ಏನು ಮಾತನಾಡಿದ್ದರು ಎಂಬುದನ್ನು ನೆನಪಿಸುತ್ತಿದ್ದೇನೆ, ನೀವು ಇದನ್ನು ನಿರಾಕರಿಸುತ್ತೀರಾ? ಶ್ರೀ ಸ್ಟ್ಯಾಲಿನ್ ಅವರೇ? ಅಂದು ಸೆಂಥಿಲ್ ಬಾಲಾಜಿ ವಿರುದ್ಧ ಮಾತನಾಡಿದ್ದ ನೀವು ಇಂದೇಕೆ ಬಲಿಪಶುವಾಗಿದ್ದೀವಿ ಎಂದು ರೋಧಿಸುತ್ತಿದ್ದೀರಿ? ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.
 
ಅಣ್ಣಾಮಲೈ ಹಂಚಿಕೊಂಡಿರುವ ವೀಡಿಯೋದಲ್ಲಿ ಸ್ಟ್ಯಾಲಿನ್ ಬಾಲಾಜಿ ನಡೆಸಿದ್ದ ಬಸ್ ಟಿಕೆಟ್ ವೆಂಡಿಂಗ್ ಮಷಿನ್ ಹಗರಣದ ಬಗ್ಗೆ ಮಾತನಾಡಿದ್ದಾರೆ. ಯಂತ್ರಗಳನ್ನು ಖರೀದಿಸಿರುವಲ್ಲಿ ನಡೆದಿರುವ ಹಗರಣದ ಬಗ್ಗೆ ನಾನು ವಿಧಾನಸಭೆಯಲ್ಲಿ ಸಾಕ್ಷ್ಯ ಸಹಿತ ಮಾತನಾಡಿದ್ದೇನೆ ಎಂದು ಸ್ಟ್ಯಾಲಿನ್ ಹೇಳಿರುವುದನ್ನು ಕೇಳಬಹುದಾಗಿದೆ.

ಕರೂರ್ ಜಿಲ್ಲೆಯಿಂದ ಓರ್ವ ಸಚಿವರು ಇದ್ದಾರೆ (ಸೆಂಥಿಲ್ ಬಾಲಾಜಿ). ಸಚಿವ ಸಂಪುಟವನ್ನು 15 ಬಾರಿ ಪುನಾರಚನೆ ಮಾಡಿದ್ದರೂ, ಹಿರಿಯ ಸಚಿವರನ್ನು ಬದಲು ಮಾಡಿದ್ದರೂ ಸೆಂಥಿಲ್ ಬಾಲಾಜಿ ಕಿರಿಯ ಸಚಿವರಾಗಿದ್ದರೂ ಸಂಪುಟದಲ್ಲೇ ಉಳಿದರು ಎಂದು ಹಳೆಯ ವೀಡಿಯೋದಲ್ಲಿ ಸ್ಟ್ಯಾಲಿನ್ ಹೇಳಿದ್ದಾರೆ.

ಎಐಎಡಿಎಂಕೆ ಸಂಕಷ್ಟದಲ್ಲಿದ್ದಾಗ ಆ ಪಕ್ಷದಲ್ಲಿ ಸಂಭಾವ್ಯ ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರು ಎಂದೂ ಸ್ಟ್ಯಾಲಿನ್ ವಿಡಿಯೋದಲ್ಲಿ ಹೇಳಿರುವುದನ್ನು ನೋಡಬಹುದಾಗಿದೆ. ಸೆಂಥಿಲ್ ಬಾಲಾಜಿ ಹಾಗೂ ಆತನ ಸಹೋದರ ಇಬ್ಬರೂ ಕರೂರ್ ಜಿಲ್ಲೆಯನ್ನು ಭ್ರಷ್ಟಾಚಾರ, ಭೂ ಕಬಳಿಕೆ, ಲೂಟಿ ಮೂಲಕ ನಿಯಂತ್ರಿಸುತ್ತಿದ್ದಾರೆ, ಆತನ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದೂ ಸ್ಟ್ಯಾಲಿನ್ ಆರೋಪಿಸಿದ್ದರು. ಎಐಎಡಿಎಂಕೆಯಲ್ಲಿ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ 2017 ರಲ್ಲಿ ಡಿಎಂಕೆ ಪಕ್ಷ ಸೇರಿದ್ದರು.

SCROLL FOR NEXT