ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಜೂನ್ 15ರಂದು ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾದಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಸಿಪಿಐ(ಎಂ) ಕಾರ್ಯಕರ್ತ ಸಿಲಿಗುರಿಯ ನರ್ಸಿಂಗ್ ಹೋಂನಲ್ಲಿ ಬುಧವಾರ ಸಾವನ್ನಪ್ಪಿದ್ದಾನೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತನಿಗೆ ಬುಲೆಟ್ ಗಾಯಗಳಾಗಿದ್ದು, ಲಾಠಿಯಿಂದ ಥಳಿಸಲಾಗಿದೆ ಎಂದು ಪದಾಧಿಕಾರಿ ಹೇಳಿದ್ದಾರೆ. ಚೋಪ್ರಾ ಪಟ್ಟಣದಿಂದ ಸುಮಾರು 50 ಕಿಮೀ ದೂರದಲ್ಲಿರುವ ಸಿಲಿಗುರಿಯಲ್ಲಿರುವ ಖಾಸಗಿ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದ 23 ವರ್ಷದ ವ್ಯಕ್ತಿಯ ಸ್ಥಿತಿ ಗಂಭೀರವಾಗಿತ್ತು ಎಂದು ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಮಾತನಾಡಿ, ಯುವ ವಿದ್ಯಾರ್ಥಿ ಕಾರ್ಯಕರ್ತನೊಬ್ಬ ಪ್ರಾಣ ಕಳೆದುಕೊಂಡಿರುವುದು ದುಃಖ ತಂದಿದೆ. ಈ ವೇಳೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಮಂಗಳವಾರ ಕೊನೆಗೊಂಡ ನಾಮಪತ್ರ ಸಲ್ಲಿಕೆ ಮತ್ತು ಉಮೇದುವಾರಿಕೆ ಹಿಂಪಡೆಯುವ ಅವಧಿಯಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ತಮ್ಮ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಹಿಂಸಾಚಾರ ಮತ್ತು ಬೆದರಿಕೆಯನ್ನು ಎದುರಿಸಿದ್ದಾರೆ ಎಂದು ಬಂಗಾಳದ ವಿರೋಧ ಪಕ್ಷಗಳು ಆರೋಪಿಸಿವೆ.
ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ಸುಮಾರು 75,000 ಸ್ಥಾನಗಳಿಗೆ ಜುಲೈ 8ರಂದು ಮತದಾನ ನಡೆಯಲಿದೆ.