ದೇಶ

'ಕಾಂಗ್ರೆಸ್ ಮುಕ್ತ ಭಾರತ'ಕ್ಕಾಗಿ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿದೆ: ಸುಶೀಲ್ ಕುಮಾರ್ ಮೋದಿ

Ramyashree GN

ಪಾಟ್ನಾ: ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಅವರು ಬುಧವಾರ ಪಾಟ್ನಾದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯು 'ಕಾಂಗ್ರೆಸ್ ಮುಕ್ತ ಭಾರತ'ಕ್ಕಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, 'ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸ್ಪರ್ಧಿಸಲು ಮಮತಾ ಬ್ಯಾನರ್ಜಿ ಬಯಸುವುದಿಲ್ಲ ಎಂಬುದನ್ನು ನಾನು ಇಲ್ಲಿ ಹೇಳಬಯಸುತ್ತೇನೆ. ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಮಾತ್ರ ಸ್ಪರ್ಧಿಸಲು ಬಯಸಿದರೆ, ಕಾಂಗ್ರೆಸ್ ಅಲ್ಲಿ ನಿರ್ನಾಮವಾಗಲಿದೆ. ಅದೇ ರೀತಿ ದೆಹಲಿ ಮತ್ತು ಪಂಜಾಬ್‌ನಲ್ಲಿ ಸ್ಪರ್ಧಿಸದಂತೆ ಕಾಂಗ್ರೆಸ್ ಪಕ್ಷವು ಅರವಿಂದ್ ಕೇಜ್ರಿವಾಲ್ ಅವರನ್ನು ಕೇಳಿದೆ' ಎಂದು ಆರೋಪಿಸಿದರು.

ತೆಲಂಗಾಣದಲ್ಲಿಯೂ ಕೆಸಿಆರ್ ಇದೇ ಮಾತನ್ನು ಹೇಳುತ್ತಿದ್ದಾರೆ. ಅಖಿಲೇಶ್ ಯಾದವ್ ಕೂಡ ಉತ್ತರ ಪ್ರದೇಶದಲ್ಲಿ ಅದನ್ನೇ ಹೇಳುತ್ತಿದ್ದಾರೆ. ಹಾಗಾಗಿ ಶುಕ್ರವಾರದ ಸಭೆ ಬಿಜೆಪಿ ಮುಕ್ತ ಭಾರತಕ್ಕಾಗಿ ನಡೆಯುತ್ತಿಲ್ಲ. ಆದರೆ, ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಪ್ರಯತ್ನಿಸುತ್ತಿವೆ ಎಂದರು.

ಒಟ್ಟು 17 ವಿರೋಧ ಪಕ್ಷಗಳು ಸಭೆಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿವೆ. ಮಮತಾ ಬ್ಯಾನರ್ಜಿ, ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಪಾಟ್ನಾ ತಲುಪುವ ನಿರೀಕ್ಷೆಯಿದೆ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಹೇಮಂತ್ ಸೋರೆನ್, ಡಿ. ರಾಜಾ ಮತ್ತು ಸೀತಾರಾಂ ಯೆಚೂರಿ ಸೇರಿದಂತೆ ಇತರೆ ನಾಯಕರು ಪಾಲ್ಗೊಳ್ಳಲಿದ್ದಾರೆ.

SCROLL FOR NEXT