ದೇಶ

2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ಕಾರ್ಯತಂತ್ರ: ಶಿಮ್ಲಾದಲ್ಲಿ ಮುಂದಿನ ಸಭೆ

Nagaraja AB

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಗುರಿ ಹೊಂದಿರುವ ವಿಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಗ್ಗಟ್ಟಿನಿಂದ ಕೆಲಸ ಮಾಡಲು  ತೀರ್ಮಾನಿಸಿವೆ. ಮುಂದಿನ ಹೋರಾಟಕ್ಕೆ ಜಂಟಿ ಕಾರ್ಯತಂತ್ರ ರೂಪಿಸಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ಸಭೆ ಸೇರಲು ತೀರ್ಮಾನಿಸಿವೆ.

ಪಾಟ್ನಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಒಗ್ಗಟ್ಟಿನಿಂದ ಹೋರಾಡುವ ನಮ್ಮ ಯೋಜನೆಗೆ ಅಂತಿಮ ರೂಪ ನೀಡಲು ಕೆಲವೇ ದಿನಗಳಲ್ಲಿ ಇನ್ನೊಂದು ಸಭೆ ನಡೆಸುತ್ತೇವೆ ಎಂದು ಪ್ರಕಟಿಸಿದರು.ಲೋಕಸಭೆ ಚುನಾವಣೆಯಲ್ಲಿ 17 ಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ಒಗ್ಗಟ್ಟಿನಿಂದ ಸ್ಪರ್ಧಿಸಲು ನಿರ್ಧರಿಸಿವೆ ಎಂದು ಅವರು ತಿಳಿಸಿದರು.

ಮುಂದಿನ ತಿಂಗಳು ಸಮಾನ ಮನಸ್ಕ ಪಕ್ಷಗಳು ಶಿಮ್ಲಾದಲ್ಲಿ ಸಭೆ ನಡೆಸಲಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.  ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬಾಬಾ ಮುಫ್ತಿ ಮತ್ತಿತರರು ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದಾದರೂ ಸಭೆ ಮುಕ್ತಾಯದ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿಲ್ಲ.

SCROLL FOR NEXT