ಅವಧಿಗೆ ಮುನ್ನವೇ ಲಂಕಾ ಕೈದಿಯ ಬಿಡುಗಡೆ ಕುರಿತು ಮರುಪರಿಶೀಲಿಸಿ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಭಾರತದಲ್ಲಿ ಸುಮಾರು 35 ವರ್ಷಗಳ ಕಾಲ ಜೈಲುವಾಸ ಅನುಭವಿಸಿರುವ ಶ್ರೀಲಂಕಾದ ಕೈದಿಯನ್ನು ಅವಧಿಗೂ ಮುನ್ನ ಬಿಡುಗಡೆ ಮಾಡುವ ಕುರಿತು ಮರುಪರಿಶೀಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ...
ನವದೆಹಲಿ: ಭಾರತದಲ್ಲಿ ಸುಮಾರು 35 ವರ್ಷಗಳ ಕಾಲ ಜೈಲುವಾಸ ಅನುಭವಿಸಿರುವ ಶ್ರೀಲಂಕಾದ ಕೈದಿಯನ್ನು ಅವಧಿಗೂ ಮುನ್ನ ಬಿಡುಗಡೆ ಮಾಡುವ ಕುರಿತು ಮರುಪರಿಶೀಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಅರ್ಜಿದಾರರು ಜೈಲಿನಿಂದ ಬಿಡುಗಡೆಯಾದ ನಂತರ ಶ್ರೀಲಂಕಾಕ್ಕೆ ಹಿಂತಿರುಗಲು ಉದ್ದೇಶಿಸಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ರಾಜ್ಯವು ನಿರ್ಧರಿಸಬಹುದಾದ ಸೂಕ್ತ ನಿರಾಶ್ರಿತರ ಶಿಬಿರಕ್ಕೆ ಅವರನ್ನು ಸ್ಥಳಾಂತರಿಸುವಂತೆ ಸೂಚಿಸಿದೆ.
ರಾಜ್ಯ ಸರ್ಕಾರವು ಭಾರತದಲ್ಲಿ ತಂಗಿರುವ ವಿದೇಶಿಗರು ಮತ್ತು ನಿರಾಶ್ರಿತರಿಗೆ ವಸತಿ ಶಿಬಿರಗಳನ್ನು ಸ್ಥಾಪಿಸಿದೆ ಮತ್ತು ಆ ನಿಟ್ಟಿನಲ್ಲಿ ನಿರ್ದೇಶನವನ್ನು ನೀಡಿದರೆ. ಅರ್ಜಿದಾರರನ್ನು ಅಲ್ಲಿಗೆ ಸ್ಥಳಾಂತರಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರ ಪೀಠಕ್ಕೆ ತಮಿಳುನಾಡು ಸರ್ಕಾರ ತಿಳಿಸಿದೆ.
ಇದನ್ನು ಓದಿ: ಸುಪ್ರೀಂ ಕೋರ್ಟ್ ನಲ್ಲಿ ಪಳನಿಸ್ವಾಮಿಗೆ ಜಯ- ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಕೆ, ಪನ್ನೀರ್ ಸೆಲ್ವಂ ಅರ್ಜಿ ವಜಾ
ಫೆಬ್ರವರಿ 1, 2018 ರ ನೀತಿಯ ಪ್ರಕಾರ ಅವಧಿಪೂರ್ವ ಬಿಡುಗಡೆಗಾಗಿ ಅರ್ಜಿದಾರ ರಾಜನ್ ಅವರು ಸಲ್ಲಿಸಿದ ಮನಿಯನ್ನು ತಮಿಳುನಾಡು ಸರ್ಕಾರ ತಿರಸ್ಕರಿಸಿದೆ. ನಂತರ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ರಾಜನ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಇಂದಿನಿಂದ ಗರಿಷ್ಠ ಮೂರು ವಾರಗಳ ಅವಧಿಯಲ್ಲಿ ಅರ್ಜಿದಾರರನ್ನು ಅವಧಿಗೂ ಮುನ್ನ ಬಿಡುಗಡೆ ಮಾಡುವ ಬಗ್ಗೆ ಮರುಪರಿಶೀಲಿಸುವಂತೆ ನಾವು ತಮಿಳುನಾಡು ರಾಜ್ಯಕ್ಕೆ ನಿರ್ದೇಶಿಸುತ್ತೇವೆ ಎಂದು ಸುಪ್ರೀಂ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.