ದೇಶ

ಹುದ್ದೆಯ ಪಾವಿತ್ರ್ಯತೆ ಕಾಪಾಡಲು NAAC ಅಧ್ಯಕ್ಷ ಸ್ಥಾನಕ್ಕೆ ಭೂಷಣ್ ಪಟವರ್ಧನ್ ರಾಜೀನಾಮೆ

Lingaraj Badiger

ನವದೆಹಲಿ: ಕೆಲವು ದಿನಗಳ ಹಿಂದಷ್ಟೇ, ವಿಶ್ವವಿದ್ಯಾಲಯಗಳು ಅನ್ಯಾಯದ ಮಾರ್ಗಗಳ ಮೂಲಕ ಪ್ರಶ್ನಾರ್ಹ ಶ್ರೇಣಿಗಳನ್ನು ಪಡೆಯುತ್ತಿವೆ ಎಂದು ಆರೋಪಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(NAAC-ನ್ಯಾಕ್) ಅಧ್ಯಕ್ಷ ಭೂಷಣ್ ಪಟವರ್ಧನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಅವರಿಗೆ ಭಾನುವಾರ ರಾತ್ರಿ ರಾಜೀನಾಮೆ ಪತ್ರ ಕಳುಹಿಸಿರುವ ಪಟವರ್ಧನ್ ಅವರು, ಹುದ್ದೆಯ ಪಾವಿತ್ರ್ಯತೆ ಕಾಪಾಡಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

"ಎಲ್ಲ ವಿಷಯವನ್ನು ಎಚ್ಚರಿಕೆಯಿಂದ ಮರುಪರಿಶೀಲಿಸಿದ ನಂತರ, ಯುಜಿಸಿ, ನ್ಯಾಕ್ ಮತ್ತು ಭಾರತೀಯ ಉನ್ನತ ಶಿಕ್ಷಣ ವ್ಯವಸ್ಥೆಯ ಹಿತಾಸಕ್ತಿಯಿಂದ ಬೆಂಗಳೂರಿನ ನ್ಯಾಕ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ" ಎಂದು ಪಟವರ್ಧನ್ ಅವರು ಬರೆದಿದ್ದಾರೆ.

"ಈ ವಿಷಯದಲ್ಲಿ ನನಗೆ ವೈಯಕ್ತಿಕವಾಗಿ ಯಾವುದೇ ಲಾಭ ಇಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಆದರೆ ಇದು ಸ್ವಾಭಿಮಾನ ಮತ್ತು ಕಾರ್ಯಕಾರಿ ಸಮಿತಿ ಮತ್ತು ನ್ಯಾಕ್ ಅಧ್ಯಕ್ಷರ ಹುದ್ದೆಯ ಪಾವಿತ್ರ್ಯವನ್ನು ಕಾಪಾಡುವ ಕಾರ್ಯವಾಗಿದೆ" ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳು ಯುಜಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದ ಪಟವರ್ಧನ್ ಅವರು, ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಶ್ನಾರ್ಹವಾದ ಶ್ರೇಣಿಗಳನ್ನು ಪಡೆಯುತ್ತಿವೆ ಎಂದು ಆರೋಪಿಸಿದ್ದರು. ಈ ಕುರಿತು ಯುಜಿಸಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

SCROLL FOR NEXT