ದೇಶ

ತ್ರಿಪುರಾ ಚುನಾವಣೋತ್ತರ ಹಿಂಸಾಚಾರ ತನಿಖೆಗೆ ಆಗಮಿಸಿದ್ದ ಸಂಸದೀಯ ತಂಡದ ಮೇಲೆ ದಾಳಿ: ಬಿಜೆಪಿ ವಿರುದ್ಧ ಕಾಂಗ್ರೆಸ್, ಸಿಪಿಎಂ ಕಿಡಿ

Srinivasamurthy VN

ಅಗರ್ತಲಾ: ತ್ರಿಪುರಾ ಚುನಾವಣೋತ್ತರ ಹಿಂಸಾಚಾರ ತನಿಖೆಗೆ ಆಗಮಿಸಿದ್ದ ಸಂಸದೀಯ ತಂಡದ ಮೇಲೆ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳು ತೀವ್ರ ಕಿಡಿಕಾರಿವೆ.

ಇತ್ತೀಚೆಗಷ್ಟೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡಿರುವ ತ್ರಿಪುರಾದಲ್ಲಿ ಚುನಾವಣೋತ್ತರ ಹಿಂಸಾಚಾರ ಭುಗಿಲೆದ್ದ ಬಳಿಕ ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತೆರಳಿದ್ದ ಸಂಸದೀಯ ತಂಡದ ಮೇಲೆಯೇ ಹಲ್ಲೆ ನಡೆಸಲಾಗಿದೆ. ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ ಚುನಾವಣೋತ್ತರ ರಾಜಕೀಯ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಮತ್ತು ಸಂತ್ರಸ್ತ ಜನರೊಂದಿಗೆ ಮಾತನಾಡಲು ಆಗಮಿಸಿದ್ದ ಸಂಸದೀಯ ತಂಡದ ಮೇಲೆ ಶುಕ್ರವಾರ ದಾಳಿ ನಡೆಸಲಾಗಿದೆ.

ಸಂಸದೀಯ ತಂಡ ಎರಡು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದು, ದಾಳಿ ಘಟನೆಯಿಂದಾಗಿ ಸಿಪಿಐ(ಎಂ) ತ್ರಿಪುರಾ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಜಿತೇಂದ್ರ ಚೌಧರಿ ಅವರು ಬಿಸಲ್‌ಗಢ್‌ನ ನೆಹಲ್‌ ಚಂದ್ರ ನಗರ ಮಾರುಕಟ್ಟೆಯಲ್ಲಿ ನಿನ್ನೆ ಆಯೋಜನೆಯಾಗಿದ್ದ  ಕಾರ್ಯಕ್ರಮ ಕೂಡ ರದ್ದಾಗಿದೆ. 

ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮೂಲಗಳು ಸಂಸದೀಯ ಪಕ್ಷದ ಸದಸ್ಯರು ಸಿಪಹಿಜಾಲಾ ಜಿಲ್ಲೆಯ ಹಿಂಸಾಚಾರ ಪೀಡಿತ ಬಿಶಾಲ್‌ಗಢಕ್ಕೆ ಹೋದಾಗ ಆಡಳಿತಾರೂಢ ಬಿಜೆಪಿ ಬೆಂಬಲಿತ ಕೆಲವರು ಅವರ ಮೇಲೆ ದಾಳಿ ಮಾಡಿ ಮೂರು ವಾಹನಗಳನ್ನು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.

ಸಿಪಿಐ(ಎಂ) ಆರೋಪ
ಇನ್ನು ಘಟನೆಯನ್ನು ತೀವ್ರ ಖಂಡಿಸಿರುವ ಸಿಪಿಐ(ಎಂ) ಹೇಳಿಕೆ ಬಿಡುಗಡೆ ಮಾಡಿದ್ದು, "ಸಂಸದರು ಮತ್ತು ಅವರ ಜೊತೆಗಿದ್ದ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮುಖಂಡರು ತಕ್ಷಣ ಸ್ಥಳದಿಂದ ನಿರ್ಗಮಿಸಿ ದೊಡ್ಡ ದಾಳಿಯಿಂದ ಪಾರಾಗಿದ್ದಾರೆ. ಪಶ್ಚಿಮ ತ್ರಿಪುರಾದ ಮೋಹನಪುರಕ್ಕೆ ಸಂಸದೀಯ ಪಕ್ಷದ ಭೇಟಿಗೂ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು. ವಿಶಾಲ್‌ಗಢ್‌ನ ನೆಹಾಲ್ ಚಂದ್ರ ನಗರಕ್ಕೆ ಅನಿರೀಕ್ಷಿತ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಮತ್ತು ಮುಖಂಡರೊಂದಿಗೆ ಸಂಸದರು ಘೋಷಣೆಗಳನ್ನು ಎದುರಿಸಿದರು ಎಂದು ತಿಳಿಸಿದೆ.

ಕಾಂಗ್ರೆಸ್ ಆರೋಪ
ಘಟನೆಯನ್ನು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಖಂಡಿಸಿದ್ದು, ತ್ರಿಪುರಾದ ಬಿಶಾಲ್‌ಗಢ್ ಮತ್ತು ಮೋಹನ್‌ಪುರದಲ್ಲಿ ಇಂದು ಕಾಂಗ್ರೆಸ್ ನಾಯಕರ ನಿಯೋಗದ ಮೇಲೆ ಬಿಜೆಪಿ ಗೂಂಡಾಗಳಿಂದ ಹಲ್ಲೆ ನಡೆದಿದೆ ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ. ನಿಯೋಗದ ಜೊತೆಗಿದ್ದ ಪೊಲೀಸರು ಏನೂ ಮಾಡಲಿಲ್ಲ ಮತ್ತು ನಾಳೆ ಬಿಜೆಪಿ ಅಲ್ಲಿ ವಿಜಯೋತ್ಸವವನ್ನು ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪೊಲೀಸ್ ಹೇಳಿಕೆ
"ಜೊತೆಯಲ್ಲಿದ್ದ ಪೊಲೀಸ್ ಬೆಂಗಾವಲು ತಂಡವು ತ್ವರಿತವಾಗಿ ಸ್ಪಂದಿಸಿ ನಿಯೋಗವನ್ನು ಸುರಕ್ಷಿತವಾಗಿ ರಕ್ಷಿಸಿತು. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರು. ಯಾವುದೇ ವ್ಯಕ್ತಿಗೆ ಯಾವುದೇ ಗಾಯಗಳು ವರದಿಯಾಗಿಲ್ಲ. 2-3 ವಾಹನಗಳು ಹಾನಿಗೊಳಗಾದ ವರದಿಯಾಗಿದೆ," ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಹಿಂಸಾಚಾರ ಮುಂದುವರೆದಿದೆ ಎಂದು ಹೇಳಿದೆ.
 

SCROLL FOR NEXT