ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಳ್ಳಲಿದೆ ಎಂದು ತೃಣಮೂಲ ಕಾಂಗ್ರೆಸ್ ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಶುಕ್ರವಾರ ಕೋಲ್ಕತ್ತಾದಲ್ಲಿ ಪಕ್ಷದ ನಾಯಕರ ಸಭೆಯ ನಂತರ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಶಾಸಕ, ಸಂಸದರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಂಡೋಪಾಧ್ಯಾಯ ಅವರು, "ಸದ್ಯ ತೃತೀಯ ರಂಗ ರಚನೆ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ" ಎಂದು ಹೇಳಿದರು. ಆದರೆ ಕಾಂಗ್ರೆಸ್ ತಾನು ವಿರೋಧ ಪಕ್ಷಗಳ ಬಿಗ್ ಬಾಸ್ ಎಂದು ನಂಬಬಾರದು ಎಂದು ಎಚ್ಚರಿಸಿದರು.
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮುಂಬರುವ ದಿನಗಳಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾರ್ಯತಂತ್ರ ರೂಪಿಸಲು "ಪ್ರಬಲ ಪ್ರಾದೇಶಿಕ ಪಕ್ಷಗಳೊಂದಿಗೆ" ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಿದರು.
ನಾವು ನಮ್ಮದೇ ದಾರಿಯಲ್ಲಿ ಹೋಗುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತೇವೆ. ನಾವು ಸದ್ಯಕ್ಕೆ ಯಾವುದೇ ತೃತೀಯ ರಂಗ ರಚನೆಯ ಬಗ್ಗೆ ಚರ್ಚಿಸುತ್ತಿಲ್ಲ ಎಂದರು.