ನವದೆಹಲಿ: ಅಮಾನ್ಯಗೊಂಡಿರುವ 1,000 ಹಾಗೂ 500 ರೂಪಾಯಿಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಪ್ರಕರಣಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾ.ಬಿಆರ್ ಗವಾಯಿ ಹಾಗೂ ನ್ಯಾ. ವಿಕ್ರಮ್ ನಾಥ್ ಅವರಿದ್ದ ಪೀಠ, ವ್ಯಕ್ತಿಗಳು ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಬಹುದು ಎಂದು ಹೇಳಿದ್ದು, ಯಾರಾದರೂ 12 ವಾರಗಳ ಅವಧಿಯಲ್ಲಿ ಮನವಿ ಮಾಡಿದರೆ ಅದನ್ನು ಪರಿಗಣಿಸಿ ಇತ್ಯರ್ಥಗೊಳಿಸಬೇಕೆಂದು ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
ಅಮಾನ್ಯಗೊಂಡ ಕರೆನ್ಸಿ ನೋಟುಗಳನ್ನು ಸ್ವೀಕರಿಸುವ ವಿಷಯದಲ್ಲಿ ವೈಯಕ್ತಿಕ ಪ್ರಕರಣಗಳಲ್ಲಿ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ನಮ್ಮ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವುದಕ್ಕೆ ಅವಕಾಶ ಇಲ್ಲ ಎಂದು ಕೋರ್ಟ್ ಹೇಳಿದೆ.
ಈಗ ಮನವಿ ಮಾಡಿದವರಿಗೆ ಸರ್ಕಾರದ ಕ್ರಮಗಳಿಂದ ಸಮಾಧಾನವಾಗದೇ ಇದ್ದಲ್ಲಿ ಹೈಕೋರ್ಟ್ ಮೊರೆ ಹೋಗಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.