ದೇಶ

PFI ನಿಷೇಧ ಆದೇಶ ಎತ್ತಿಹಿಡಿದ ಯುಎಪಿಎ ನ್ಯಾಯಾಧಿಕರಣ

Srinivasamurthy VN

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಯುಎಪಿಎ ಟ್ರಿಬ್ಯುನಲ್ (ನ್ಯಾಯಾಧಿಕರಣ) ಎತ್ತಿ ಹಿಡಿದಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಪಿಎಫ್‍ಐ ಮೇಲೆ ವಿಧಿಸಿದ ನಿಷೇಧವನ್ನು ಪರಿಶೀಲಿಸಲು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅಧ್ಯಕ್ಷತೆಯಲ್ಲಿ ಟ್ರಿಬ್ಯುನಲ್ ರಚಿಸಲಾಗಿತ್ತು. ಪಿಎಫ್‍ಐ ಮೇಲೆ ನಿಷೇಧ ಹೇರಿದ ಕ್ರಮದ ಬಗ್ಗೆ ದೇಶದ ವಿವಿಧೆಡೆ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ, ಕೇಂದ್ರದ ಆದೇಶವನ್ನು ಎತ್ತಿ ಹಿಡಿದೆ.

ಕಳೆದ ವರ್ಷ ಸೆಪ್ಟೆಂಬರ್ 28 ರಂದು ಯುಎಪಿಎ ಸೆಕ್ಷನ್3 ರ ಅಡಿಯಲ್ಲಿ ಪಿಎಫ್‍ಐ ಮತ್ತು ಅದರ ಅನುಬಂಧ ಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಗೃಹ ಸಚಿವಾಲಯ ಘೋಷಿಸಿತ್ತು. ಐದು ವರ್ಷ ನಿಷೇಧ ಹೇರಿತ್ತು.

ಏನಿದು ಯುಎಪಿಎ ಕಾಯ್ದೆ?
ಯುಎಪಿಎ 1967, ಕಾನೂನುಬಾಹಿರ ಚಟುವಟಿಕೆಗಳ ಸಂಘಟನೆಗಳನ್ನು ತಡೆಯುವ ಗುರಿ ಹೊಂದಿದೆ. ಭಾರತದ ಸಮಗ್ರತೆ ಹಾಗೂ ಸಾರ್ವಭೌಮತ್ವದ ವಿರುದ್ಧ ಚಟುವಟಿಕೆಗಳನ್ನು ತಡೆಯಲು ಈ ಕಾಯ್ದೆ ಹೆಚ್ಚಿನ ಅಧಿಕಾರ ನೀಡುತ್ತದೆ. ಇತ್ತೀಚೆಗೆ ಅದಕ್ಕೆ ತಿದ್ದುಪಡಿ ತರಲಾಗಿತ್ತು. ಈ ತಿದ್ದುಪಡಿಯಲ್ಲಿ ಪ್ರಮುಖ ಬದಲಾವಣೆಯನ್ನು ಸೆಕ್ಷನ್ 35ಕ್ಕೆ ಮಾಡಲಾಗಿತ್ತು. 

ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಕಾಯ್ದೆ, 2019ರಲ್ಲಿ (ಯುಎಪಿಎ 2019) ಯಾವುದೇ ಕಾನೂನಿನ ಪ್ರಕ್ರಿಯೆ ಇಲ್ಲದೆ ವ್ಯಕ್ತಿಗಳನ್ನು ಉಗ್ರರು ಎಂದು ಘೋಷಿಸಲು ಸರ್ಕಾರಕ್ಕೆ ಅವಕಾಶ ನೀಡಲಾಗಿದೆ. ಸೆಕ್ಷನ್ 35ರ ಅಡಿ ಈ ಮೊದಲು ಸಂಘಟನೆಯನ್ನು ಮಾತ್ರವೇ 'ಭಯೋತ್ಪಾದಕ' ಎಂದು ವರ್ಗೀಕರಿಸಲು ಅವಕಾಶವಿತ್ತು. ತಿದ್ದುಪಡಿ ಬಳಿಕ ವ್ಯಕ್ತಿಗಳನ್ನು ಕೂಡ ಭಯೋತ್ಪಾದಕ ಎಂದು ಘೋಷಿಸಲು ಅವಕಾಶ ಕಲ್ಪಿಸಲಾಯಿತು. 

ವ್ಯಕ್ತಿ ಹಾಗೂ ಸಂಘಟನೆಯು ಭಯೋತ್ಪಾದನೆಯಲ್ಲಿ ಭಾಗಿಯಾಗಿದೆ ಎಂದು ಸರ್ಕಾರಕ್ಕೆ ಅನಿಸಿದರೆ, ವ್ಯಕ್ತಿ ಅಥವಾ ಸಂಘಟನೆ ಹೆಸರನ್ನು ಕಾಯ್ದೆಯ 1ನೇ ಪರಿಚ್ಛೇದಕ್ಕೆ ಸೇರಿಸಲಾಗುತ್ತದೆ. ಅದರ ಅಡಿ ನಿಷೇಧ ಹೇರಲು ಸಾಧ್ಯವಾಗುತ್ತದೆ. ಯುಎಪಿಎ ಕಾಯ್ದೆ ಸೆಕ್ಷನ್ 3ರ ಅಡಿ ಸರ್ಕಾರವು ತನ್ನ ಗೆಜೆಟ್ ಅಧಿಸೂಚನೆ ಮೂಲಕ ಯಾವುದೇ ಅಂಗಸಂಸ್ಥೆಗಳನ್ನು 'ಕಾನೂನುಬಾಹಿರ' ಎಂದು ಘೋಷಿಸಬಹುದಾಗಿದೆ. 

SCROLL FOR NEXT