ದೇಶ

ಗುಜರಾತ್‌: ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿಯೊಂದಿಗೆ ವೇದಿಕೆ ಹಂಚಿಕೊಂಡ ಬಿಜೆಪಿ ನಾಯಕರು!

Ramyashree GN

ಅಹಮದಾಬಾದ್: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಮಾರ್ಚ್ 27 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಶೈಲೇಶ್ ಚಿಮನ್‌ಲಾಲ್ ಭಟ್ ಅವರು ಎರಡು ದಿನಗಳ ಹಿಂದೆ ಶನಿವಾರ ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸರ್ಕಾರ ಆಯೋಜಿಸಿದ್ದ ಹರ್ ಘರ್ ಜಲ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಬಿಲ್ಕಿಸ್ ಬಾನು ಪ್ರಕರಣದ ಆರೋಪಿ ಶೈಲೇಶ್ ಚಿಮನ್‌ಲಾಲ್ ಭಟ್, ಬಿಜೆಪಿ ಸಂಸದ ಜಸ್ವಂತ್ ಸಿಂಗ್ ಭಭೋರ್ ಮತ್ತು ಶಾಸಕ ಶೈಲೇಶ್ ಭಭೋರ್ ಅವರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಈ ಘಟನೆ ಮಾರ್ಚ್ 25 ರಂದು ದಾಹೋಡ್ ಜಿಲ್ಲೆಯ ಕರಮ್ಡಿ ಗ್ರಾಮದಲ್ಲಿ ನಡೆದಿದೆ.

ಸುದ್ದಿಸಂಸ್ಥೆ ಪಿಟಿಐ ವರದಿಗಳ ಪ್ರಕಾರ, ಶನಿವಾರದ ಕಾರ್ಯಕ್ರಮದಲ್ಲಿ ನೀವು ಭಾಗವಹಿಸಿದ್ದೀರಾ ಎಂದು ಕೇಳಿದಾಗ, ಅಪರಾಧಿ ಶೈಲೇಶ್ ಭಟ್ ಅವರು 'ಪೂಜೆ'ಗಾಗಿ ಅಲ್ಲಿಗೆ ಹೋಗಿದ್ದೆ ಎಂದರು. ಆದರೆ, ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ಸಮಾರಂಭದ ವಿಡಿಯೋಗಳು ಮತ್ತು ಚಿತ್ರಗಳಲ್ಲಿ ಶೈಲೇಶ್ ಚಿಮನ್‌ಲಾಲ್ ಭಟ್ ಅವರು ದಾಹೋದ್ ಸಂಸದರಾದ ಜಸ್ವಂತ್ ಸಿನ್ಹ್ ಭಭೋರ್ ಮತ್ತು ಲಿಮ್ಖೇಡಾ ಶಾಸಕರಾದ ಶೈಲೇಶ್ ಭಭೋರ್ ಅವರೊಂದಿಗೆ ವೇದಿಕೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಪೋಟೊ ತೆಗೆಸಿಕೊಂಡು ಮತ್ತು ಪೂಜೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಚಿತ್ರಗಳನ್ನು ಬಿಜೆಪಿ ನಾಯಕರು ಸಹ ಟ್ವೀಟ್ ಮಾಡಿದ್ದಾರೆ.

2002ರ ಫೆಬ್ರುವರಿ 27ರಂದು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಬೋಗಿಯಲ್ಲಿದ್ದ 59 ಕರಸೇವಕರನ್ನು ಭೀಕರವಾಗಿ ದಹಿಸಿ ಕೊಂದ ಬಳಿಕ ಗುಜರಾತ್‌ ರಾಜ್ಯದಾದ್ಯಂತ ಹಿಂಸಾಚಾರ ಭುಗಿಲೆದ್ದಿತು. ಆಗ ಐದು ತಿಂಗಳ ಗರ್ಭಿಣಿ, 21ರ ಹರೆಯದ ಬಿಲ್ಕಿಸ್‌ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಲ್ಲದೇ ಬಿಲ್ಕಿಸ್‌ ಅವರ ಮೂರು ವರ್ಷದ ಮಗಳು ಮತ್ತು ಆಕೆಯ ಕುಟುಂಬದ ಏಳು ಜನರನ್ನು ಕೊಲ್ಲಲಾಗಿತ್ತು.

ಆರೋಪ ಸಾಬೀತಾಗಿ 11 ಅಪರಾಧಿಗಳು 15ಕ್ಕೂ ಹೆಚ್ಚು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಗುಜರಾತ್ ಸರ್ಕಾರ ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆಗೆ ಅನುಮತಿ ನೀಡಿತ್ತು. ಹೀಗಾಗಿ ಆಗಸ್ಟ್ 15ರಂದು ಅವರೆಲ್ಲರೂ ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಶೈಲೇಶ್ ಚಿಮನ್‌ಲಾಲ್ ಭಟ್ ಅವರು ಬಿಜೆಪಿ ಶಾಸಕರು ಮತ್ತು ಸಂಸದರ ಜೊತೆಗೆ ವೇದಿಕೆಯಲ್ಲಿ ಕುಳಿತಿರುವುದನ್ನು ತೋರಿಸಿದ ಸಮಾರಂಭದ ಚಿತ್ರಗಳನ್ನು ಟಿಎಂಸಿಯ ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ.

ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಈಗ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

SCROLL FOR NEXT