ದೇಶ

ನಿರೀಕ್ಷಣಾ ಜಾಮೀನಿನ ವಿರುದ್ಧ ಲೋಕಾಯುಕ್ತ ಅರ್ಜಿ; ಮಾಡಾಳ್ ವಿರೂಪಾಕ್ಷಪ್ಪ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

Ramyashree GN

ನವದೆಹಲಿ: ಟೆಂಡರ್ ಮಂಜೂರು ಮಾಡಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಸಲ್ಲಿಸಿರುವ ಅರ್ಜಿ ಕುರಿತು ಸೋಮವಾರ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಳಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ಬಿಜೆಪಿ ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ.

ಮಾರ್ಚ್ 14 ರಂದು, ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಲೋಕಾಯುಕ್ತರ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿತ್ತು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಬಿಜೆಪಿ ಶಾಸಕರ ಪುತ್ರ ಮಾಡಾಳ್ ಪ್ರಶಾಂತ್ ಅವರನ್ನು ಕೆಎಸ್‌ಡಿಎಲ್ ಕಚೇರಿಯಲ್ಲಿ ತಂದೆಯ ಪರವಾಗಿ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಮಾರ್ಚ್ 2 ರಂದು ಬಂಧಿಸಿದ್ದರು.

ಶಾಸಕರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದೇಶ ಪ್ರತಿಯನ್ನು ಸ್ವೀಕರಿಸಿದ 48 ಗಂಟೆಗಳ ಒಳಗೆ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಹೈಕೋರ್ಟ್ ಶಾಸಕರಿಗೆ ಸೂಚಿಸಿತ್ತು.

5 ಲಕ್ಷ ಬಾಂಡ್‌ ಮೇಲೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಅಲ್ಲದೆ, ವಿರೂಪಾಕ್ಷಪ್ಪ ಅವರು ಜಾಮೀನಿನ ಮೇಲಿರುವಾಗ ಸಾಕ್ಷಿಯನ್ನು ಹಾಳು ಮಾಡದಂತೆಯೂ ಸೂಚಿಸಲಾಗಿದೆ.

ಮಗನ ಬಂಧನದ ಹಿನ್ನೆಲೆಯಲ್ಲಿ ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದರು.

ಆಪಾದಿತ ಲಂಚ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಮತ್ತು ಅದರಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಶಾಸಕರು ಅರ್ಜಿಯಲ್ಲಿ ಹೇಳಿದ್ದರು. 

ಮಾಡಾಳ್ ಪ್ರಶಾಂತ್ ಬಂಧನದ ನಂತರ ಲೋಕಾಯುಕ್ತ ಪೊಲೀಸರು ಮಾಡಲ್ ವಿರೂಪಾಕ್ಷಪ್ಪ ಅವರ ಮನೆ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ 8.23 ​​ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT