ದೇಶ

ಒಪಿಎಸ್ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ನೇಮಕ

Lingaraj Badiger

ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಮಂಗಳ ವಾರ ನಿರಾಕರಿಸಿದ ಬೆನ್ನಲ್ಲೇ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ(ಇಪಿಎಸ್) ಅವರನ್ನು ಎಐಎಡಿಎಂಕೆ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಪ್ರತಿಸ್ಪರ್ಧಿ ಒ ಪನ್ನೀರಸೆಲ್ವಂ(ಒಪಿಎಸ್)ನೇತೃತ್ವದ ಬಣ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಮದ್ರಾಸ್ ಹೈಕೋರ್ಟ್ ತೀರ್ಪಿನ ನಂತರ ಸಮಯ ವ್ಯರ್ಥ ಮಾಡದೆ, ಎಐಎಡಿಎಂಕೆ ಚುನಾವಣಾ ಆಯುಕ್ತರಾದ ನಾಥಮ್ ಆರ್ ವಿಶ್ವನಾಥನ್ ಮತ್ತು ಪೊಲ್ಲಾಚಿ ವಿ ಜಯರಾಮನ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 68 ವರ್ಷದ ಪಳನಿಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಪಕ್ಷದ ಪದಾಧಿಕಾರಿಗಳು ಅವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.

ಪಕ್ಷದ ಸಂಸ್ಥಾಪಕ ಎಂಜಿ ರಾಮಚಂದ್ರನ್(ಎಂಜಿಆರ್) ಮತ್ತು ದಿವಂಗತ ಪಕ್ಷದ ವರಿಷ್ಠೆ ಜೆ ಜಯಲಲಿತಾ ಅವರು ಹೊಂದಿದ್ದ ಪಕ್ಷದ ಸರ್ವಶಕ್ತ ಹುದ್ದೆಯಾಗಿರುವ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸುವುದಾಗಿ ಪಳನಿಸ್ವಾಮಿ ಹೇಳಿದ್ದಾರೆ.

ಎಐಎಡಿಎಂಕೆ ಪಕ್ಷದ ಆಂತರಿಕ ಚುನಾವಣಾ ಫಲಿತಾಂಶದ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವ ಸಾಧ್ಯತೆಯಿದೆ.

SCROLL FOR NEXT