ದೇಶ

ಮನ್ ಕಿ ಬಾತ್ ಗೆ 830 ಕೋಟಿ ರೂ. ವೆಚ್ಚ ಎಂದು ಟ್ವೀಟಿಸಿದ್ದ ಗುಜರಾತ್ ಎಎಪಿ ಮುಖ್ಯಸ್ಥನ ವಿರುದ್ಧ ದೂರು ದಾಖಲು!

Vishwanath S

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' 100 ಸಂಚಿಕೆಗಳನ್ನು ಪೂರೈಸಿದ್ದು ಇದಕ್ಕೆ 830 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಟ್ವೀಟ್ ಮಾಡಿದ್ದ ಗುಜರಾತ್ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಇಸುದನ್ ಗಧ್ವಿ ವಿರುದ್ಧ ಅಹಮದಾಬಾದ್‌ನಲ್ಲಿ ದೂರು ದಾಖಲಿಸಲಾಗಿದೆ.

ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ನಲ್ಲಿ ದೂರು ದಾಖಲಾಗಿದೆ. ಮನ್ ಕಿ ಬಾತ್ ಒಂದು ದಿನದ ವೆಚ್ಚ 8.3 ಕೋಟಿ. 100 ಸಂಚಿಕೆಗಳಿಗೆ 830 ಕೋಟಿ ರೂಪಾಯಿ ಆಗುತ್ತದೆ. ಇದಕ್ಕೆ ನಮ್ಮ ತೆರಿಗೆ ಹಣ ಬಳಸಿ ವಂಚಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಇದರ ವಿರುದ್ಧ ಎಚ್ಚೆತ್ತುಕೊಂಡು ಪ್ರತಿಭಟಿಸಬೇಕಾಗಿದೆ ಎಂದು ಗಧ್ವಿ ಟ್ವೀಟ್ ಮಾಡಿದ್ದರು.

ದೇಶದ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ನ 100ನೇ ಸಂಚಿಕೆಯನ್ನು ಪ್ರಧಾನಿ ಕಳೆದ ಭಾನುವಾರ ಪೂರ್ಣಗೊಳಿಸಿದರು. 100ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ದೇಶವಾಸಿಗಳ ಉತ್ಸಾಹವನ್ನು ಶ್ಲಾಘಿಸಿದರು. 

ಈ ಕಾರ್ಯಕ್ರಮವು ಒಳ್ಳೆಯತನ ಮತ್ತು ಸಕಾರಾತ್ಮಕತೆಯ ಹಬ್ಬವಾಗಿದೆ. ಮಾಸಿಕ ಕಾರ್ಯಕ್ರಮವು 100 ಸಂಚಿಕೆಗಳ ಪಯಣದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ವ್ಯಕ್ತಿಗಳ ಕಥೆಗಳನ್ನು ತಿಳಿಸಿದೆ ಮತ್ತು ಸಮಾಜದಲ್ಲಿ ಬದಲಾವಣೆಯ ಪ್ರತಿನಿಧಿಯಾಗಿದೆ ಎಂದು ಹೇಳಿದರು.

SCROLL FOR NEXT