ದೇಶ

ಪತ್ನಿಗೆ ಅನಾರೋಗ್ಯ; ಮಧ್ಯಂತರ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋದ ಮನೀಶ್ ಸಿಸೋಡಿಯಾ

Ramyashree GN

ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಬುಧವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಸೋಡಿಯಾ ಮಧ್ಯಂತರ ಜಾಮೀನು ಕೋರಿದ್ದಾರೆ.

ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಗುರುವಾರ ಅರ್ಜಿ ವಿಚಾರಣೆಗೆ ಪಟ್ಟಿ ಮಾಡಿದ್ದು, ಅದೇ ದಿನವೇ ಈ ಪ್ರಕರಣದ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಪ್ರಯತ್ನಿಸುವಂತೆ ಸಿಬಿಐಗೆ ಕೇಳಿದರು.

ಕಳೆದ ವಾರ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರು ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 12ರವರೆಗೆ ವಿಸ್ತರಿಸಿದ್ದರು. ಸಿಸೋಡಿಯಾ ಅವರಿಗೆ ಪೂರಕ ಚಾರ್ಜ್ ಶೀಟ್‌ನ ಇ-ಪ್ರತಿಯನ್ನು ನೀಡುವಂತೆಯೂ ನ್ಯಾಯಾಲಯ ಸಿಬಿಐಗೆ ಸೂಚಿಸಿತ್ತು.

ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ಅಪೂರ್ಣ ತನಿಖಾ ವರದಿಯನ್ನು ಸಲ್ಲಿಸಿದೆ ಎಂದು ಪ್ರತಿಪಾದಿಸಿದ ಸಿಸೋಡಿಯಾ ಅವರ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಡೀಫಾಲ್ಟ್ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ಏಪ್ರಿಲ್ 25 ರಂದು ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಎಪ್ರಿಲ್ 26 ರಂದು ಸಿಬಿಐ ದೆಹಲಿ ಹೈಕೋರ್ಟ್‌ಗೆ ತಾನು ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ಹಗರಣ ಪ್ರಕರಣವು ಆಳವಾದ ಪಿತೂರಿ ಮತ್ತು ಇದು ಅಂದುಕೊಂಡಷ್ಟು ಸರಳವಾಗಿಲ್ಲ ಎಂದು ಹೇಳಿದೆ.

ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಪ್ರಕರಣದಲ್ಲಿ ಸಿಸೋಡಿಯಾ ಅವರ ಕಸ್ಟಡಿಯನ್ನು ಮೇ 8 ರವರೆಗೆ ವಿಸ್ತರಿಸಿ ಏಪ್ರಿಲ್ 29 ರಂದು ನ್ಯಾಯಮೂರ್ತಿ ನಾಗಪಾಲ್ ಅದೇಶಿಸಿದ್ದರು.

SCROLL FOR NEXT