ದೇಶ

ಇದೇ ಮೊದಲು, ಜಮ್ಮುವಿನಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳಾ ಪೊಲೀಸರ ನಿಯೋಜನೆ!

Nagaraja AB

ಜಮ್ಮು-ಕಾಶ್ಮೀರ: ಮಹಿಳೆಯರ ಸುರಕ್ಷತೆ ಖಾತ್ರಿ  ಮತ್ತು ಮಹಿಳಾ ಡ್ರಗ್ ಪೆಡ್ಲರ್‌ಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ರಾತ್ರಿ ಸಮಯದಲ್ಲಿ ಜಮ್ಮು ನಗರದ ವಿವಿಧ ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ಸಮಯದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ. 

ರಾತ್ರಿ ವೇಳೆಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆ ಖಾತ್ರಿಪಡಿಸಲು ಹಾಗೂ ಮಹಿಳೆಯರ ತಪಾಸಣೆಗೆ ನಗರದ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಮಹಿಳಾ ಪೊಲೀಸ ನಿಯೋಜಿಸಲಾಗಿದೆ ಎಂದು ಕಾನ್‌ಸ್ಟೆಬಲ್‌ ಅನಿತಾ ತಿಳಿಸಿದ್ದಾರೆ. ಸ್ಥಳೀಯ ಮಹಿಳೆಯರ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾ ಇಡಲಾಗುವುದು, ಏಕೆಂದರೆ ಪುರುಷ ಪೊಲೀಸರು ಅವರನ್ನು ಹೆಚ್ಚು ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಕರ್ತವ್ಯ ನಿರ್ವಹಿಸಲಾಗುವುದು ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಮೂಲಗಳ ಪ್ರಕಾರ, ಪುರುಷ ಪೊಲೀಸರೊಂದಿಗೆ 50 ರಿಂದ 60 ಕ್ಕೂ ಹೆಚ್ಚು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಮ್ಮು ನಗರದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಹೆಚ್ಚಿನ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಮುಂದಿನ ಹಂತದಲ್ಲಿ ಅವರನ್ನು ಜಮ್ಮುವಿನ ಗ್ರಾಮಾಂತರ ಪ್ರದೇಶಗಳಿಗೂ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ಈ ಕ್ರಮವನ್ನು ಅಲ್ಲಿನ ಮಹಿಳಾ ನಿವಾಸಿಗಳು ಸ್ವಾಗತಿಸಿದ್ದಾರೆ. "ಇದು ಪೊಲೀಸರಿಂದ ಉತ್ತಮ ಮತ್ತು ಶ್ಲಾಘನೀಯ ಉಪಕ್ರಮವಾಗಿದೆ. ಇದು ರಾತ್ರಿಯಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಹಾಯ ಮಾಡುತ್ತದೆ. ಇದು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರಿಗೂ ಸಹಾಯ ಮಾಡುತ್ತದೆ" ಎಂದು ಸ್ಥಳೀಯ ನಿವಾಸಿ ತಾರಿಕಾ ಮಹಾಜನ್ ತಿಳಿಸಿದ್ದಾರೆ. 

SCROLL FOR NEXT