ದೇಶ

ಶರದ್ ಪವಾರ್ ರಾಜೀನಾಮೆ ತಿರಸ್ಕರಿಸಿದ ಎನ್‌ಸಿಪಿ ಸಮಿತಿ

Lingaraj Badiger

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ನೂತನ ಮುಖ್ಯಸ್ಥರನ್ನು ಆಯ್ಕೆ ಮಾಡಲು ರಚಿಸಲಾಗಿದ್ದ ಸಮಿತಿಯು ಹಾಲಿ ಅಧ್ಯಕ್ಷ ಶರದ್ ಪವಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸಿದೆ ಎಂದು ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ಶುಕ್ರವಾರ ಹೇಳಿದ್ದಾರೆ.

"ಸಮಿತಿಯು ಸರ್ವಾನುಮತದಿಂದ ಶರದ್ ಪವಾರ್ ಅವರ ರಾಜೀನಾಮೆ ತಿರಸ್ಕರಿಸಿ ನಿರ್ಣಯ ಅಂಗೀಕರಿಸಿದೆ. ಇದು ಅವರ ರಾಜೀನಾಮೆ ನಿರ್ಧಾರವನ್ನು ಸರ್ವಾನುಮತದಿಂದ ತಿರಸ್ಕರಿಸುತ್ತದೆ ಮತ್ತು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸುತ್ತದೆ" ಎಂದು ಸಮಿತಿಯ ಸಭೆಯ ನಂತರ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶರದ್ ಪವಾರ್ ಅವರು ಮೇ 2 ರಂದು ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ನಂತರ ಸ್ವತಃ ಶರದ್ ಪವಾರ್ ಅವರೇ ನೂತನ ಅಧ್ಯಕ್ಷರ ನೇಮಕ ಸಂಬಂಧ ಅಜಿತ್ ಪವಾರ್, ಸುಪ್ರಿಯಾ ಸುಳೆ, ಮಾಜಿ ಕೇಂದ್ರ ಸಚಿವ ಪರ್ಫುಲ್ ಪಟೇಲ್ ಮತ್ತು ಛಗನ್ ಭುಜಬಲ್ ಒಳಗೊಂಡ ಸಮಿತಿ ರಚಿಸಿದ್ದರು.

"ನಾವು ಈ ನಿರ್ಣಯದೊಂದಿಗೆ ಪವಾರ್ ಸಾಹೇಬ್ ಅವರನ್ನು ಭೇಟಿ ಮಾಡುತ್ತೇವೆ ಮತ್ತು ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡುತ್ತೇವೆ" ಎಂದು ಸಮಿತಿಯ ಉಪಾಧ್ಯಕ್ಷ ಮತ್ತು ಸಂಚಾಲಕರೂ ಆಗಿರುವ ಪ್ರಫುಲ್ ಪಟೇಲ್ ಅವರು ಹೇಳಿದ್ದಾರೆ.

ಪಕ್ಷ ಮತ್ತು ದೇಶಕ್ಕೆ ಶರದ್ ಪವಾರ್ ಅವರಂತಹ ನಾಯಕನ ಅಗತ್ಯವಿದೆ. ಪವಾರ್ ಸಾಹೇಬ್ ಅವರು ದೇಶದ ಗೌರವಾನ್ವಿತ ನಾಯಕರಾಗಿದ್ದಾರೆ. ಪವಾರ್ ಅವರ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅವರ ಭಾವನೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ" ಎಂದು ಪಟೇಲ್ ತಿಳಿಸಿದ್ದಾರೆ.

ಸಭೆ ಆರಂಭವಾಗುತ್ತಿದ್ದಂತೆ, ಹಲವಾರು ಎನ್‌ಸಿಪಿ ಕಾರ್ಯಕರ್ತರು "ಐ ಆಮ್ ವಿತ್ ಸಾಹೇಬ್" ಎಂಬ ಸಂದೇಶದೊಂದಿಗೆ ಕ್ಯಾಪ್ ಧರಿಸಿ ಪವಾರ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು.

SCROLL FOR NEXT