ಮುಂಬೈ: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ಘೋಷಣೆ ಕೂಗಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಹೇಳಿದ್ದಾರೆ.
ಪ್ರಾದೇಶಿಕ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಪವಾರ್, "ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮೋದಿ ಅವರು ಧಾರ್ಮಿಕ ಘೋಷಣೆಗಳನ್ನು ಕೂಗಿರುವುದು ನನಗೆ ಆಶ್ಚರ್ಯ ತಂದಿದೆ. ನಾವು ಜಾತ್ಯತೀತತೆಯ ಪರಿಕಲ್ಪನೆಯನ್ನು ಒಪ್ಪಿಕೊಂಡಿದ್ದೇವೆ. ಆದರೆ ನೀವು ಧರ್ಮ ಅಥವಾ ಧಾರ್ಮಿಕ ವಿಚಾರವನ್ನು ಚುನಾವಣೆಯಲ್ಲಿ ಪ್ರಸ್ತಾಪಿಸಿದರೆ ವಿಭಿನ್ನ ರೀತಿಯ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.
"ಚುನಾವಣೆಯಲ್ಲಿ ಸ್ಪರ್ಧಿಸುವ ಸಮಯದಲ್ಲಿ ನಾವು ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಜಾತ್ಯತೀತತೆಗಾಗಿ ಪ್ರತಿಜ್ಞೆ ಮಾಡುತ್ತೇವೆ" ಎಂದು ಅವರು ಟಿವಿ9 ಮರಾಠಿಗೆ ತಿಳಿಸಿದ್ದಾರೆ.
ರತ್ನಗಿರಿ ಜಿಲ್ಲೆಯ ಬಾರ್ಸು ಗ್ರಾಮದಲ್ಲಿ ಬೃಹತ್ ತೈಲ ಸಂಸ್ಕರಣಾಗಾರ ಯೋಜನೆಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಸಿಪಿ ನಾಯಕ, "ನಾನು ಅಲ್ಲಿಗೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ. ಆದರೆ ನಾನು ಯಾವಾಗ ಮತ್ತು ಹೇಗೆ ಭೇಟಿ ನೀಡುತ್ತೇನೆ ಎಂಬುದನ್ನು ನಂತರ ನಿರ್ಧರಿಸಲಾಗುವುದು" ಎಂದಿದ್ದಾರೆ.
ಪವಾರ್, "ನಾನು ಬರಸು ಗ್ರಾಮಸ್ಥರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇನೆ, ನಾನು ತಜ್ಞರೊಂದಿಗೆ ಮತ್ತೊಮ್ಮೆ ಸಭೆ ನಡೆಸುತ್ತೇನೆ. ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಪರಿಹರಿಸಬೇಕು" ಎಂದು ಶರದ್ ಪವಾರ್ ಹೇಳಿದ್ದಾರೆ.