ದೇಶ

ದರೋಡೆ, ಮಾದಕ ವಸ್ತು ಕಳ್ಳಸಾಗಣೆ, ಭಯೋತ್ಪಾದನೆ ಮಟ್ಟ ಹಾಕಲು ಕ್ರಮ: 6 ರಾಜ್ಯಗಳ 122 ಕಡೆಗಳಲ್ಲಿ ಎನ್ಐಎ ಶೋಧ

Sumana Upadhyaya

ನವದೆಹಲಿ: ಪಾಕಿಸ್ತಾನ ಮತ್ತು ಕೆನಡಾ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ದರೋಡೆಕೋರರು, ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕ ಗುಂಪುಗಳ ಜೊತೆ ನಂಟಿನ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಬುಧವಾರ ಆರು ರಾಜ್ಯಗಳ 122 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

NIA ತಂಡಗಳು ಇಂದು ಬೆಳಗ್ಗೆಯಿಂದ ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶದ ಕೆಲವು ಶಂಕಿತ ಮನೆಗಳ ಮೇಲೆ ದಾಳಿ ನಡೆಸಿವೆ. ಸುಮಾರು ಹನ್ನೆರಡು ಅಧಿಕಾರಿಗಳನ್ನು ಒಳಗೊಂಡ ಎನ್‌ಐಎ ಅಧಿಕಾರಿಗಳ ತಂಡವು ಈ ಎಲ್ಲಾ ಸ್ಥಳಗಳಿಗೆ ನಸುಕಿನ ಜಾವ 4 ಗಂಟೆ ಸುಮಾರಿಗೆ ತೆರಳಿದೆ.

ಎನ್ಐಎ ದಾಖಲಿಸಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಶೋಧ ನಡೆಯುತ್ತಿದೆ. ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಮೂಲದ ಸಂಘಟಿತ ಕ್ರಿಮಿನಲ್ ಸಂಘಟನೆಗಳು, ಸಂಪರ್ಕ ಜಾಲಗಳು, ಉನ್ನತ ದರೋಡೆಕೋರರು ಮತ್ತು ಅವರ ಕ್ರಿಮಿನಲ್ ಮತ್ತು ವ್ಯಾಪಾರ ಸಹಚರರ ವಿರುದ್ಧದ ದಮನದ ಭಾಗವಾಗಿ ದಾಳಿಗಳು ಮತ್ತು ಹುಡುಕಾಟಗಳು ನಡೆದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತಹ ಭಯೋತ್ಪಾದಕ ಜಾಲಗಳನ್ನು ಮತ್ತು ಅವುಗಳ ಹಣಕಾಸು ಮತ್ತು ಬೆಂಬಲ ಮೂಲಸೌಕರ್ಯಗಳನ್ನು ಕಿತ್ತುಹಾಕಲು ತನಿಖೆ ಮುಂದುವರಿಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢದಲ್ಲಿ ಗ್ಯಾಂಗ್ ಸ್ಟರ್ ಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಜನರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ಸಂಸ್ಥೆಯು ಈಗಾಗಲೇ ಮೂರು ಪ್ರಕರಣಗಳ ಪೈಕಿ ಎರಡು ಆರೋಪಪಟ್ಟಿ ಸಲ್ಲಿಸಿದೆ.

ಉತ್ತರ ಭಾರತದಲ್ಲಿ ಸಕ್ರಿಯವಾಗಿರುವ ಹಲವಾರು ಕ್ರಿಮಿನಲ್ ಗ್ಯಾಂಗ್‌ಗಳು ಈಗ ದುಬೈನಿಂದ ಕಾರ್ಯನಿರ್ವಹಿಸುತ್ತಿವೆ. 1990ರ ದಶಕದಲ್ಲಿ ಭೂಗತ ಜಗತ್ತಿನ ರೀತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಖಲಿಸ್ತಾನ್ ಪರ ಸಂಘಟನೆಗಳು ತಮ್ಮ ನೆಟ್‌ವರ್ಕ್‌ಗಳನ್ನು ಬಳಸುತ್ತಿವೆ. ವಿದೇಶಗಳಲ್ಲಿ ನೆಲೆಸಿರುವ ಅರ್ಶ್ ದಲಾ ಮತ್ತು ಗೌರವ್ ಪಟಿಯಾಲ್‌ರಂತಹ ಪರಾರಿಯಾದವರು, ಉದ್ದೇಶಿತ ಹತ್ಯೆಗಳು, ಸುಲಿಗೆ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಭಾರತೀಯ ಜೈಲುಗಳು ಮತ್ತು ಇತರ ದೇಶಗಳಲ್ಲಿ ಇರುವ ಖಲಿಸ್ತಾನ್ ಪರ ಅಂಶಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಎನ್ ಐಎ ಚಾರ್ಜ್ ಶೀಟ್ ನಲ್ಲಿ ಹೇಳಿದೆ. 

ಕೆನಡಾ ಮೂಲದ ದರೋಡೆಕೋರ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ, ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್ ರಿಂಡಾ ಮತ್ತು ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ ಯುಎಸ್ ಮೂಲದ ಗುರುಪತ್ವಂತ್ ಸಿಂಗ್ ಪನ್ನು ವಿರುದ್ಧ ಆಗಸ್ಟ್ 2022 ರಲ್ಲಿ NIA ಮೂರು ಪ್ರಕರಣಗಳನ್ನು ದಾಖಲಿಸಿದೆ. 

SCROLL FOR NEXT