ದೇಶ

ಶವಗಳ ಮೇಲೆ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸಲು ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ

Srinivas Rao BV

ಬೆಂಗಳೂರು: ಶವಗಳ ಮೇಲೆ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದಕ್ಕೆ ಐಪಿಸಿಯ ಸಂಬಂಧಪಟ್ಟ ನಿಬಂಧನೆಗಳಿಗೆ ತಿದ್ದುಪಡಿ ತರಬೇಕು ಅಥವಾ ಹೊಸ ಕಾನೂನನ್ನು ರೂಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
 
ಶವದ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ ಶಿಕ್ಷೆ ನೀಡುವುದಕ್ಕೆ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ ಅವಕಾಶ ಇಲ್ಲದ ಕಾರಣ ಆರೋಪಿಯನ್ನು ಈ ಆರೋಪದಿಂದ ಬಿಡುಗಡೆ ಮಾಡಿರುವ ಹೈಕೋರ್ಟ್, ಕೇಂದ್ರಕ್ಕೆ ಈ ಸೂಚನೆ ನೀಡಿದೆ.

ಆರೋಪಿ ಮಹಿಳೆಯನ್ನು ಕೊಲೆ ಮಾಡಿ ನಂತರ ಆಕೆಯ ಮೃತದೇಹದೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಐಪಿಸಿಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 50,000 ರೂ.ಗಳ ದಂಡವನ್ನು ನ್ಯಾಯಾಲಯ ವಿಧಿಸಿದೆ.

ಆದರೆ ಆತ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಶಿಕ್ಷೆ ನೀಡಲು ಐಪಿಸಿ ಸೆಕ್ಷನ್ ಅಡಿಯಲ್ಲಿ ನಿರ್ದಿಷ್ಟ ನಿಬಂಧನೆಗಳಿಲ್ಲದ ಕಾರಣ ಈ ಅಪರಾಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ಅಡಿಯಲ್ಲಿ ಬರುತ್ತದೆಯೋ ಅಥವಾ ಸೆಕ್ಷನ್ 377 ಅಡಿಯಲ್ಲಿ ಆತನನ್ನು ಶಿಕ್ಷಿಸಬೇಕೋ ಎಂಬ ಗೊಂದಲ ಉಂಟಾಗಿತ್ತು.

ಸೆಕ್ಷನ್ 375 ಹಾಗೂ 377 ಅನ್ವಯವಾಗದ ಕಾರಣ ಇದರ ಅಡಿಯಲ್ಲಿ ಆತನನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾ. ಬಿ ವೀರಪ್ಪ ಹಾಗೂ ವೆಂಕಟೇಶ್ ನಾಯ್ಕ್ ಟಿ ಹೇಳಿದ್ದಾರೆ.

SCROLL FOR NEXT