ದೇಶ

ಕುಸ್ತಿಪಟುಗಳ ಪ್ರತಿಭಟನೆ: ಜೂನ್ 1 ರಂದು ಮುಜಾಫರ್‌ನಗರದಲ್ಲಿ ‘ಮಹಾ ಪಂಚಾಯತ್‌‘ ನಡೆಸುವುದಾಗಿ ಟಿಕಾಯತ್‌ ಘೋಷಣೆ

Manjula VN

ಮುಜಾಫರ್‌ನಗರ: ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಚರ್ಚಿಸಲು ಮುಜಾಫರ್‌ನಗರದ ಸೊರಮ್ ಗ್ರಾಮದಲ್ಲಿ ಗುರುವಾರ 'ಮಹಾಪಂಚಾಯತ್' ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ನರೇಶ್ ಟಿಕಾಯತ್ ಬುಧವಾರ ಹೇಳಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಲವಾರು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಚಾರವಾಗಿ ಮಹಾ ಪಂಚಾಯತ್‌ನಲ್ಲಿ ದೀರ್ಘವಾಗಿ ಚರ್ಚೆ ನಡೆಸಲಾಗುವುದು. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌, ದೆಹಲಿ, ರಾಜಸ್ಥಾನಗಳಿಂದ ಹಿರಿಯ ಖಾಪ್‌ಗಳು ಮಹಾ ಪಂಚಾಯತ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಟಿಕಾಯತ್ ಹೇಳಿದರು.

ಸಿಂಗ್‌ ಬಂಧನಕ್ಕೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯ ಭಾಗ ವಾಗಿ, ಒಲಿಂಪಿಕ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ತಾವು ಗೆದ್ದಿರುವ ಪದಕಗಳನ್ನು ಗಂಗಾ ನದಿಯಲ್ಲಿ ಹಾಕಲು ಮಂಗಳವಾರ ಹರಿದ್ವಾರಕ್ಕೆ ಕುಸ್ತಿಪಟುಗಳು ಬಂದಿದ್ದರು.

ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್‌, ವಿನೇಶಾ ಪೋಗಟ್, ಬಜರಂಗ್‌ ಪೂನಿಯಾ ಹಾಗೂ ಅವರ ನೂರಾರು ಬೆಂಬಲಿಗರು ಹರಿದ್ವಾರದ ‘ಹರ್‌ ಕಿ ಪೌರಿ’ ಘಾಟ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಯೂನಿಯನ್‌ ಮುಖಂಡ ನರೇಶ್‌ ಟಿಕಾಯತ್‌ ಕುಸ್ತಿಪಟುಗಳ ಮನವೊಲಿಸಿ ಪದಕಗಳನ್ನು ನೀರಿಗೆ ಹಾಕದಂತೆ ತಡೆದರು.

ಮೇ 28ರಂದು ದೆಹಲಿ ಪೊಲೀಸರು ಕುಸ್ತಿಪಟುಗಳ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ನಂತರ ಪ್ರತಿಭಟನೆ ಮಾಡುತ್ತಿದ್ದ ಸ್ಥಳದಿಂದ ಬಲವಂತಾಗಿ ಕುಸ್ತಿಪಟುಗಳನ್ನು ತೆರವುಗೊಳಿಸಿದ್ದರು.

SCROLL FOR NEXT