ದೇಶ

ಕೋಟ್ಯಾಂತರ ರೂ. ನಗದು ಡೀಲ್ ವಿಡಿಯೋದಲ್ಲಿ ಕೇಂದ್ರ ಸಚಿವ ತೋಮರ್ ಪುತ್ರ; ಎಫ್‌ಐಆರ್ ದಾಖಲು

Lingaraj Badiger

ಭೋಪಾಲ್‌: ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿರುವುದರ ನಡುವೆಯೇ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಪುತ್ರ ಮತ್ತು ಮಧ್ಯವರ್ತಿಯೊಬ್ಬರು ಹಲವು ಕೋಟಿ ರೂಪಾಯಿ ನಗದು ವರ್ಗಾವಣೆ ಬಗ್ಗೆ ಮಾತನಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸೋಮವಾರ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಜಟಾಪಟಿಗೆ ಕಾರಣವಾಗಿದೆ.

ತೋಮರ್ ಅವರ ಪುತ್ರ ದೇವೇಂದ್ರ ಪ್ರತಾಪ್ ಸಿಂಗ್ ತೋಮರ್ ಅವರು ಈ ವಿಡಿಯೋ ನಕಲಿ ಎಂದು ಹೇಳಿದ್ದು, ಈ ಸಂಬಂಧ ಭೋಪಾಲ್‌ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕು ಮತ್ತು ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ದೇವೇಂದ್ರ ತೋಮರ್‌ಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಲಾದ ವೀಡಿಯೊದಲ್ಲಿ, ಆಪಾದಿತ ಮಧ್ಯವರ್ತಿಗಳು ಕೋಟ್ಯಂತರ ರೂಪಾಯಿಗಳ ಹಣವನ್ನು ವರ್ಗಾವಣೆ ಮಾಡಲು ನಾಲ್ಕರಿಂದ ಐದು ಖಾತೆಗಳನ್ನು ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಡಿಮ್ನಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಈ ವಿಡಿಯೋ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 469 (ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶ) ಅಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಈ ಪ್ರಕರಣ ತನಿಖೆಯಲ್ಲಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಗುಪ್ತಾ ತಿಳಿಸಿದ್ದಾರೆ.

SCROLL FOR NEXT