ದೇಶ

ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ; ಗುಂಡಿನ ಗಾಯಗಳೊಂದಿಗೆ ಮಹಿಳೆ ಸೇರಿದಂತೆ ಇಬ್ಬರ ಮೃತದೇಹ ಪತ್ತೆ

Ramyashree GN

ಇಂಫಾಲ: ಮಣಿಪುರದ ಇಂಫಾಲ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಗುಂಡಿನ ಗಾಯದೊಂದಿಗೆ ಮಹಿಳೆ ಸೇರಿದಂತೆ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬುಧವಾರದಂದು ಇಂಫಾಲ್ ಪಶ್ಚಿಮ ಜಿಲ್ಲೆಯ ತೈರೆನ್‌ಪೋಕ್ಪಿ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ತಲೆಯ ಮೇಲೆ ಗುಂಡಿನ ಗಾಯದೊಂದಿಗೆ ಮಧ್ಯವಯಸ್ಕ ಮಹಿಳೆಯ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಆರ್‌ಐಎಂಎಸ್) ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಇಂಫಾಲ್ ಪೂರ್ವ ಜಿಲ್ಲೆಯ ತಖೋಕ್ ಮಾಪಾಲ್ ಮಖಾ ಪ್ರದೇಶದಲ್ಲಿ ನಲವತ್ತರ ಹರೆಯದ ವ್ಯಕ್ತಿಯ ಶವ ಪತ್ತೆಯಾಗಿದೆ. ಸ್ಥಳೀಯರಿಗೆ ಅಪರಿಚಿತ ವ್ಯಕ್ತಿಯ ಶವ ಕಂಡುಬಂದಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. 

ಪೋಲೀಸರ ಪ್ರಕಾರ, ಮೃತದೇಹವು ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿದ ಸ್ಥಿತಿಯಲ್ಲಿ ಮತ್ತು ತಲೆಯ ಮೇಲೆ ಗುಂಡಿನ ಗಾಯಗಳಾಗಿರುವ ಸ್ಥಿತಿಯಲ್ಲಿ ಕಂಡುಬಂದಿವೆ. ಮೃತದೇಹವನ್ನು ಗುರುತಿಸಲು ಮತ್ತು ಮರಣೋತ್ತರ ಪರೀಕ್ಷೆಗಾಗಿ ಇಂಫಾಲ್ ಪೂರ್ವದಲ್ಲಿರುವ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ.

ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಕಾಂಗ್‌ಚುಪ್ ತಪ್ಪಲಿನಿಂದ ಇತ್ತೀಚೆಗೆ 'ಅಪರಿಚಿತ ವ್ಯಕ್ತಿಗಳಿಂದ ಅಪಹರಿಸಲ್ಪಟ್ಟ' ನಾಲ್ವರ ಪೈಕಿ ಮೃತ ಮಹಿಳೆ ಕೂಡ ಒಬ್ಬರು ಎಂದು ನಂಬಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಮೈತೇಯಿ ಸಮುದಾಯದವರಿರುವ ಪ್ರದೇಶದಲ್ಲಿ ಬೇರೆ ಸಮುದಾಯದ ಅಪರಿಚಿತ ವ್ಯಕ್ತಿಗಳ ಉಪಸ್ಥಿತಿಯಿಂದ ಗಾಬರಿಗೊಂಡ ಜನರು, ಅವರ ಬಗ್ಗೆ ತಿಳಿದುಕೊಳ್ಳಲು ಫೇಯೆಂಗ್‌ನ ಮಹಿಳೆಯರು ಸೇರಿದಂತೆ ದೊಡ್ಡ ಗುಂಪು ಕಾಂಗ್‌ಚುಪ್ ಬೆಟ್ಟದ ಕಡೆಗೆ ಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಂಗಳವಾರ ಕಾಂಗ್‌ಚುಪ್ ತಪ್ಪಲಿನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ನಂತರ ಇಬ್ಬರು ಮಣಿಪುರ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ ಒಂಬತ್ತು ಮಂದಿಗೆ ಬುಲೆಟ್ ಗಾಯಗಳಾಗಿವೆ.

ಮೇ ತಿಂಗಳಲ್ಲಿ ಮೊದಲ ಬಾರಿಗೆ ಜನಾಂಗೀಯ ಘರ್ಷಣೆಗಳು ಆರಂಭವಾದಾಗಿನಿಂದ ಮಣಿಪುರವು ಪುನರಾವರ್ತಿತ ಹಿಂಸಾಚಾರಗಳಿಂದ ಕಂಗೆಟ್ಟಿದೆ. ಅಂದಿನಿಂದ ಇಲ್ಲಿಯವರೆಗೆ 180ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

SCROLL FOR NEXT