ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಾಲ್ ಸರೋವರದಲ್ಲಿ ಹೌಸ್‌ಬೋಟ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಾಂಗ್ಲಾದೇಶದ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಪ್ರಸಿದ್ಧ ಪ್ರವಾಸಿ ತಾಣ ದಾಲ್ ಸರೋವರದಲ್ಲಿ ಶನಿವಾರ 5 ಹೌಸ್‌ಬೋಟ್‌ಗಳು ಮತ್ತು 10 ಕ್ಕೂ ಹೆಚ್ಚು ಮರದ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಅವಘಡ ಸಂಭವಿಸಿದ ಗಂಟೆಗಳ ನಂತರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೂವರೂ ಪ್ರವಾಸಿಗರು ಬಾಂಗ್ಲಾದೇಶದ ಪ್ರಜೆಗಳು. ಬೆಂಕಿಯಲ್ಲಿ ಸುಟ್ಟು ಬೂದಿಯಾದ ಸಫೀನಾ ಹೌಸ್‌ಬೋಟ್‌ನಲ್ಲಿ ಅವರು ತಂಗಿದ್ದರು. ದಾಲ್ ಸರೋವರದ ಘಾಟ್ ಸಂಖ್ಯೆ 9ರ ಸಮೀಪವಿರುವ ಹೌಸ್‌ಬೋಟ್‌ನಲ್ಲಿ ಬೆಳಗಿನ ಜಾವ 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿತು. ಸುತ್ತಮುತ್ತಲಿನ ಇತರ ಹೌಸ್‌ಬೋಟ್‌ಗಳು ಮತ್ತು ಇತರ ಮರದ ವಸತಿಗಳಿಗೂ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಬೆಂಕಿಯನ್ನು ನಿಯಂತ್ರಿಸಲು ರಿವರ್ ಸ್ಟೇಷನ್ ನೆಹರು ಪಾರ್ಕ್, ಬಟಮಾಲೂ ಮತ್ತು ಗಾವ್ಕಡಾಲ್‌ನಿಂದ ಅಗ್ನಿಶಾಮಕ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಬೆಂಕಿ ಅವಘಡದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ ಎನ್ನಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಎಸ್‌ಡಿಆರ್‌ಎಫ್, ಕಾಶ್ಮೀರ ಪೊಲೀಸ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಏಜೆನ್ಸಿಗಳ ತಂಡಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದವು ಎಂದು ಶ್ರೀನಗರ ಉಪ ಆಯುಕ್ತ ಐಜಾಜ್ ಅಸದ್ ಹೇಳಿದ್ದಾರೆ.
ದಾಲ್ ಸರೋವರದ ಘಾಟ್ ಸಂಖ್ಯೆ 9 ಬಳಿ ಬೆಂಕಿ ಕಾಣಿಸಿಕೊಂಡಿತ್ತು
ಹೌಸ್‌ಬೋಟ್‌ಗಳಲ್ಲಿ ತಂಗಿದ್ದ ಪ್ರವಾಸಿಗರು ಮತ್ತು ನಿವಾಸಿಗಳನ್ನು ಮೊದಲು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಚಳಿಯ ನಡುವೆ ಅಗ್ನಿ ಸಂತ್ರಸ್ತರಿಗೆ ಹೊದಿಕೆ ಸೇರಿದಂತೆ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಬೆಂಕಿಗೆ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ. ಅಪಘಾತದ ಕೆಲವು ಚಿತ್ರಗಳು ಹೊರಬಂದಿದ್ದು, ಇದರಲ್ಲಿ ಹೌಸ್‌ಬೋಟ್‌ಗಳು ಮತ್ತು ಅನೇಕ ಮರದ ಮನೆಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿರುವುದನ್ನು ಕಾಣಬಹುದು.