ನವದೆಹಲಿ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್, ಮತದಾರರಿಗೆ ಹಲವು ಭರವಸೆಗಳನ್ನು ನೀಡುತ್ತಿದೆ.
ಎರಡನೇ ಹಂತದ ಮತದಾನಕ್ಕೆ ಕೇವಲ ನಾಲ್ಕು ದಿನಗಳು ಬಾಕಿಯಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದಂತೆ ಛತ್ತೀಸ್ ಗಢದಲ್ಲೂ 'ಗೃಹ ಲಕ್ಷ್ಮಿ ಯೋಜನೆ'ಯನ್ನು ಜಾರಿಗೆ ತರಲಾಗುವುದು ಎಂದು ಸೋಮವಾರ ಘೋಷಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, "'ಗೃಹ ಲಕ್ಷ್ಮಿ ಯೋಜನೆ' ಅನ್ನು ಛತ್ತೀಸ್‌ಗಢದಲ್ಲಿಯೂ ಜಾರಿಗೆ ತರಲಾಗುವುದು. ಈ ಯೋಜನೆ ಅಡಿ ವರ್ಷಕ್ಕೆ 15,000 ರೂ.ಗಳನ್ನು ಮಹಿಳೆಯರ ಖಾತೆಗಳಿಗೆ ಜಮೆ ಮಾಡಲಾಗುವುದು. ಇದರೊಂದಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್ 500 ರೂ. ಸಬ್ಸಿಡಿ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸ್ವ-ಸಹಾಯ ಗುಂಪುಗಳು ಮತ್ತು ಸಕ್ಷಮ್ ಯೋಜನೆಗಳ ಸಾಲಗಳನ್ನು ಮನ್ನಾ ಮಾಡಲಾಗುವುದು. ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರ, ರೈತರು, ಕಾರ್ಮಿಕರು, ಮಹಿಳೆಯರು, ಆದಿವಾಸಿಗಳು, ದಲಿತರು ಮತ್ತು ಬಡವರ ಸಮೃದ್ಧಿಯ ಮಾದರಿಯನ್ನು ಪ್ರಸ್ತುತಪಡಿಸಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿಯಲ್ಲಿದ್ದು, ಪ್ರತಿ ತಿಂಗಳೂ 2 ಸಾವಿರ ರೂ. ಹಣವನ್ನು ಮನೆ ಯಜಮಾನಿಯ ಖಾತೆಗೆ ಹಾಕಲಾಗುತ್ತಿದೆ. ಇದೇ ಮಾದರಿಯ ಯೋಜನೆಯನ್ನು ಛತ್ತೀಸ್‌ಗಢದಲ್ಲೂ ಕಾಂಗ್ರೆಸ್ ಪಕ್ಷ ಘೋಷಿಸಿದೆ.