ದೇಶ

ಭಾರತೀಯ ನೌಕಾಪಡೆಗೆ ಆನೆಬಲ: ದೇಶದ ಮೊದಲ ದೇಶಿ ನಿರ್ಮಿತ ‘ಆ್ಯಂಟಿ ಶಿಪ್ ಮಿಸೈಲ್’ ಪರೀಕ್ಷೆ ಯಶಸ್ವಿ

Srinivasamurthy VN

ನವದೆಹಲಿ: ಭಾರತೀಯ ನೌಕಾಪಡೆ ಬತ್ತಳಿಕೆಗೆ ಮತ್ತೊಂದು ದೇಶಿ ನಿರ್ಮಿತ ಶಸ್ತ್ರದ ಸೇರ್ಪಡೆಯಾಗಿದ್ದು, ದೇಶದ ಮೊಟ್ಟ ಮೊದಲ ದೇಶಿ ನಿರ್ಮಿತ ‘ಆ್ಯಂಟಿ ಶಿಪ್ ಮಿಸೈಲ್’ (indigenously developed anti-ship missile) ಪರೀಕ್ಷೆ ಯಶಸ್ವಿಯಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ತನ್ನ ಆರಂಭಿಕ ಪ್ರಯೋಗಗಳ ನಂತರ ಭಾರತವು ತನ್ನ ದೇಶಿ ನಿರ್ಮಿತ (indigenously developed missile) ನಾವಲ್ ಆ್ಯಂಟಿ ಶಿಪ್ ಮಿಸೈಲ್ (anti-ship missile) ಎರಡನೇ ಪ್ರಯೋಗವನ್ನು ಮಂಗಳವಾರ ಯಶಸ್ವಿಯಾಗಿ ನಡೆಸಿದ್ದು, ಈ ಪರೀಕ್ಷೆಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯ (Indian Navy) ನಡುವಿನ ಸಹಯೋಗದಲ್ಲಿ ನಡೆಯಿತು. 

ಡಿಆರ್‌ಡಿಒ ಜತೆಗೂಡಿ ಭಾರತೀಯ ನೌಕಾ ಪಡೆಯು ಮೊದಲ ದೇಶಿ ನಿರ್ಮಿದ ನಾವಲ್ ಆ್ಯಂಡಿ ಶಿಪ್ ಕ್ಷಿಪಣಿಯನ್ನು ನವೆಂಬರ್ 21ರಂದು ಅಂದರೆ ಇಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಸ್ಥಾಪಿತ ಕ್ಷಿಪಣಿ ತಂತ್ರಜ್ಞಾನದಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ನೌಕಾ ಪಡೆಯು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಅಷ್ಟೇ ಅಲ್ಲದೇ, ಸೀ ಕಿಂಗ್ 42ಬಿ ಹೆಲಿಕಾಪ್ಟರ್‌ನಿಂದ ಕ್ಷಿಪಣಿ ಉಡಾವಣೆ ಮಾಡಿರುವ ದೃಶ್ಯಾವಳಿಯ ವಿಡಿಯೋವನ್ನು ಕೂಡ ಹಂಚಿಕೊಂಡಿದೆ.

ಇದಕ್ಕೂ ಮೊದಲು, 2022ರ ಮೇ ತಿಂಗಳಲ್ಲಿ ನಾವಲ್ ಆ್ಯಂಟಿ ಶಿಪ್ ಮಿಸೈಲ್ ಶಾರ್ಟ್ ರೇಂಜ್ (NASM-SR) ಮೊದಲ ಬಾರಿಗೆ ಪ್ರಯೋಗಕ್ಕೆ ಒಳಗಾಗಿತ್ತು. ಒಡಿಶಾ ಕರಾವಳಿಯ ಚಂಡಿಪುರದಲ್ಲಿ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಲ್ಲಿ ಭಾರತೀಯ ನೌಕಾಪಡೆಯ ಸೀ ಕಿಂಗ್ ಹೆಲಿಕಾಪ್ಟರ್‌ನಿಂದ ಕ್ಷಿಪಣಿಯನ್ನು ಹಾರಿಸಲಾಗಿತ್ತು. 

ಲಾಂಗ್ ರೇಂಜ್ ಕ್ಷಿಪಣಿ ಪ್ರಯೋಗಕ್ಕೂ ಸಿದ್ಧತೆ
ಇದೇ ವೇಳೆ ಭಾರತೀಯ ನೌಕಾಪಡೆಯು 500 ಕಿ.ಮೀ ವ್ಯಾಪ್ತಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಮೀರಿಸುವಂತಹ ಹೊಸ ಲಾಂಗ್ ರೇಂಜ್ ಆಂಟಿ-ಶಿಪ್ ಕ್ಷಿಪಣಿಯ ಮೊದಲ ಪ್ರಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವುದಾಗಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಘೋಷಿಸಿತ್ತು. ಭಾರತ-ರಷ್ಯಾ ಕ್ರೂಸ್ ಕ್ಷಿಪಣಿಯಾಗಿರುವ ಬ್ರಹ್ಮೋಸ್ ಮೂಲತಃ 290 ಕಿ.ಮೀ ವ್ಯಾಪ್ತಿಯನ್ನು ಹೊದಿದೆ. ಈ ಕ್ಷಿಪಣಿಯ ಟಾರ್ಗೆಟ್ ವ್ಯಾಪ್ತಿಯನ್ನು 350 ಕಿ.ಮೀ.ನಿಂದ 400 ಕಿ.ಮೀ.ನವರೆಗೆ ಹೆಚ್ಚಿಸಲಾಗುತ್ತಿದೆ. ಈ ವರ್ಷದ ಮಾರ್ಚ್‌ನಲ್ಲಿ ಭಾರತೀಯ ನೌಕಾಪಡೆಯು ಐಎನ್‌ಎಸ್ ವಿಶಾಖಪಟ್ಟಣದಿಂದ ಎಂಆರ್‌ಎಸ್‌ಎಎಂ ಕ್ಷಿಪಣಿ (ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ) ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಿತು. ಇದು ಆ್ಯಂಟಿ ಶಿಪ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಮಧ್ಯಮ ವ್ಯಾಪ್ತಿಯ ಮತ್ತು ಮೇಲ್ಮೈಯಿಂದ ಆಕಾಶಕ್ಕೆ ನೆಗೆಯುವ ಸಾಮರ್ಥ್ಯವನ್ನು ಹೊಂದಿರುವ ಕ್ಷಿಪಣಿಯನ್ನು ಡಿಆರ್‌ಡಿಒ ಮತ್ತು ಇಸ್ರೇಲಿ ಏರೋಸ್ಪೇಸ್ ಇಂಡಸ್ಟ್ರೀಸ್(ಐಎಐ) ಸಹಯೋಗದೊಂದಿಗೆ ಭಾರತ್ ಡೈನಾಮಿಕ್ಸ್ ಲಿ. ಕಂಪನಿಯಲ್ಲಿ ತಯಾರಿಸಲಾಗಿದೆ ಎಂದು ಹೇಳಲಾಗಿದೆ.
 

SCROLL FOR NEXT