ದೇಶ

ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರನ್ನು ತಲುಪಲು ಇನ್ನೂ 12-14 ಗಂಟೆ ತೆಗೆದುಕೊಳ್ಳುತ್ತದೆ: ಖುಲ್ಬೆ

Lingaraj Badiger

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ 12ನೇ ದಿನವಾದ ಗುರುವಾರವೂ ಮುಂದುವರೆದಿದ್ದು, ಕಾರ್ಮಿಕರನ್ನು ತಲುಪಲು ಇನ್ನು 12 ರಿಂದ 14 ಗಂಟೆ ತೆಗೆದುಕೊಳ್ಳುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾರ್ಮಿಕರನ್ನು ಕರೆತರಲು ಮಾರ್ಗ ಸೃಷ್ಟಿಸುವ ಕೊರೆಯುವ ಯಂತ್ರಕ್ಕೆ ಅಡ್ಡ ಬಂದ ಕಬ್ಬಿಣದ ಜಾಲರಿಯನ್ನು ಗುರುವಾರ ಬೆಳಗ್ಗೆ ತೆಗೆದುಹಾಕಲಾಯಿತು. ಆದರೆ ರಕ್ಷಣಾ ಕಾರ್ಯಾಚರಣೆ 12 ರಿಂದ 14 ಗಂಟೆಗಳ ಕಾಲ ವಿಳಂಬವಾಗಲಿದೆ ಎಂದು ಪ್ರಧಾನಿ ಕಚೇರಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ಅವರು ತಿಳಿಸಿದ್ದಾರೆ.

ಪೈಪ್‌ನ ಒಳಗಿನ ಕ್ಲಾಸ್ಟ್ರೋಫೋಬಿಕ್ ವಾತಾವರಣದಲ್ಲಿ ಜಾಲರಿ ತೆಗೆಯುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ಅವರು ಹೇಳಿದ್ದಾರೆ.

"ಜಾಲರಿ ತೆಗೆದುಹಾಕಲು ನಮಗೆ ಆರು ಗಂಟೆಗಳು ಬೇಕಾಯಿತು. ಆದರೆ ಒಳ್ಳೆಯ ಸುದ್ದಿ ಏನೆಂದರೆ 45 ಮೀಟರ್ ವರೆಗೆ ಕೊರೆತದ ನಂತರ ನಿನ್ನೆ ಬಂದ ಅಡಚಣೆಯನ್ನು ನಾವು ತೆರವುಗೊಳಿಸಿದ್ದೇವೆ" ಎಂದು ಖುಲ್ಬೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈಗ ಪೈಪ್‌ಗಳನ್ನು 45 ಮೀಟರ್‌ಗೂ ಹೆಚ್ಚು ರವಾನಿಸಲು ವೆಲ್ಡಿಂಗ್ ಮಾಡಿ ಪೈಪ್ ಜೋಡಿಸುವ ಪ್ರಕ್ರಿಯೆ ಪುನರಾರಂಭವಾಗಿದೆ. ಕೊರೆಯುವ ಕಾರ್ಯವೂ ಶೀಘ್ರವೇ ಪುನರಾರಂಭವಾಗಲಿದೆ ಎಂದಿದ್ದಾರೆ.

ಕಾರ್ಮಿಕರನ್ನು ತಲುಪುವ ಸಂಪೂರ್ಣ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಇನ್ನೂ ಸುಮಾರು 12 ರಿಂದ 14 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದರ ನಂತರ, ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರತೆಗೆಯಲು ಇನ್ನೂ ಮೂರು ಗಂಟೆಗಳು ಬೇಕಾಗುತ್ತದೆ. ಅದನ್ನು ಎನ್‌ಡಿಆರ್‌ಎಫ್ ಸಹಾಯದಿಂದ ಮಾಡಲಾಗುವುದು ಎಂದು ಖುಲ್ಬೆ ಹೇಳಿದ್ದಾರೆ.

SCROLL FOR NEXT