ದೇಶ

ಫೇಸ್‌ಬುಕ್‌ ಸ್ಟೇಟಸ್ ನಲ್ಲಿ ಪಾಕ್ ಧ್ವಜ ಶೇರ್‌, ಯುವಕನ ಬಂಧನ

Nagaraja AB

ಬರೇಲಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ ಪಾಕಿಸ್ತಾನ ಧ್ವಜ  ಶೇರ್ ಮಾಡಿ, ನಿರ್ದಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಗಳೊಂದಿಗೆ ವೀಡಿಯೊವೊಂದನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ 30 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ.  

ಆರೋಪಿ ಬುಂದನ್ ಅಲಿ ವಿರುದ್ಧ ಸ್ಥಳೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬರೇಲಿಯ ಇಜ್ಜತ್‌ನಗರ ನಿವಾಸಿಯಾಗಿರುವ ಅಲಿ ಅರೆಕಾಲಿಕ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅಲಿ ತಮ್ಮ ಎಫ್‌ಬಿ ಖಾತೆಯ ಸ್ಟೇಟಸ್ ಸಂದೇಶದಲ್ಲಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅಪಹಾಸ್ಯ ಮಾಡುವ ವೀಡಿಯೊದೊಂದಿಗೆ ಪಾಕಿಸ್ತಾನದ ಧ್ವಜವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಫೋಸ್ಟ್ ಡಿಲೀಟ್ ಮಾಡಲು ನಿರಾಕರಿದ್ದಾನೆ. ಆದ್ದರಿಂದ ಬೇರೆ ಆಯ್ಕೆಯಿಲ್ಲದೆ ಪೊಲೀಸರಿಗೆ ದೂರು ನೀಡಿರುವುದಾಗಿ ದೂರುದಾರರು ತಿಳಿಸಿದ್ದಾರೆ. 

ತನಿಖೆಯ ಸಮಯದಲ್ಲಿ ಅಲಿ ಅವರ ಪೋಸ್ಟ್ "ಪ್ರಚೋದನಕಾರಿ ಎಂದು ಕಂಡುಬಂದಿದ್ದು, ಅವರ ವಿರುದ್ಧ  ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಜೊತೆಗೆ ಐಪಿಸಿ ಸೆಕ್ಷನ್ 295-ಎ (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ), 153-ಎ (ಧರ್ಮದ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿಯನ್ನು ರಿಮ್ಯಾಂಡ್ ಮ್ಯಾಜಿಸ್ಟ್ರೇಟ್  ಮುಂದೆ ಹಾಜರುಪಡಿಸಿದ್ದು,  ಅವರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ ಎಂದು ಎಸ್ ಹೆಚ್ ಒ ಜೈಶಂಕರ್ ಸಿಂಗ್ ತಿಳಿಸಿದ್ದಾರೆ. 

SCROLL FOR NEXT