ಭುವನೇಶ್ವರ: ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ವಿಶ್ವಾಸಾರ್ಹ ಸಹಾಯಕ ಮತ್ತು ಮಾಜಿ ಐಎಎಸ್ ಅಧಿಕಾರಿ ವಿಕೆ ಪಾಂಡಿಯನ್ ಅವರು ಸೋಮವಾರ ಆಡಳಿತಾರೂಢ ಬಿಜು ಜನತಾ ದಳ(ಬಿಜೆಡಿ)ಗೆ ಅಧಿಕೃವಾಗಿ ಸೇರ್ಪಡೆಯಾಗಿದ್ದಾರೆ.
ಇಂದು ನವೀನ್ ಪಟ್ನಾಯಕ್ ಅವರ ನಿವಾಸ್‌ನಲ್ಲಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ವಿಕೆ ಪಾಂಡಿಯನ್ ಅವರು ಬಿಜೆಡಿಗೆ ಸೇರಿದರು.
ಪಾಂಡಿಯನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಸಿಎಂ ನವೀನ್ ಪಟ್ನಾಯಕ್, ಪಾಂಡಿಯನ್ ಅವರು ಒಡಿಶಾದ ಜನರಿಗಾಗಿ ಹಲವಾರು ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಮತ್ತು ಜನರ ಗೌರವ ಮತ್ತು ವಿಶ್ವಾಸವನ್ನು ಗಳಿಸಿದ್ದಾರೆ ಎಂದು ಹೇಳಿದರು. ಅಲ್ಲದೆ ಮುಂದೆಯೂ ಪಕ್ಷದ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ವ್ಯಾಟಿಕನ್ ಭೇಟಿ ವೇಳೆ ತಮ್ಮೊಂದಿಗೆ ಇದ್ದ ಮಹಿಳೆಯ ಕುರಿತು ಗೊಂದಲಕ್ಕೆ ತೆರೆ ಎಳೆದ ಒಡಿಶಾ ಸಿಎಂ ಪಟ್ನಾಯಕ್
ಕಳೆದ ತಿಂಗಳು ಐಎಎಸ್ ತ್ಯಜಿಸಿದ್ದ ಪಾಂಡಿಯನ್ ಅವರನ್ನು 5ಟಿ ಇನಿಶಿಯೇಟಿವ್ಸ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು ಮತ್ತು ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿತ್ತು.
ಜಗನ್ನಾಥ ದೇವರ ಆಶೀರ್ವಾದ ಮತ್ತು ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಪ್ರಾಮಾಣಿಕತೆ, ಸಮರ್ಪಣೆ ಮತ್ತು ವಿನಮ್ರತೆಯಿಂದ ರಾಜ್ಯದ ಜನರಿಗಾಗಿ ನಿಸ್ವಾರ್ಥದಿಂದ ಕೆಲಸ ಮಾಡುತ್ತೇನೆ ಎಂದು ವಿ.ಕೆ.ಪಾಂಡಿಯನ್ ಹೇಳಿದ್ದಾರೆ.
ಆದಾಗ್ಯೂ, ಅವರಿಗೆ ಬಿಜೆಡಿಯಲ್ಲಿ ಯಾವ ಸ್ಥಾನ ನೀಡಲಾಗುತ್ತದೆ ಎಂಬುದನ್ನು ಪಕ್ಷ ಇನ್ನೂ ಪ್ರಕಟಿಸಿಲ್ಲ. ಆದರೆ ಪಾಂಡಿಯನ್ ಅವರಿಗೆ ಅವಕಾಶ ಕಲ್ಪಿಸಲು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.