ದೇಶ

ಮಿಜೊರಾಮ್: ಮತ ಎಣಿಕೆ ದಿನಾಂಕ ಬದಲಾವಣೆಗೆ ಸಾಲು ಸಾಲು ಪ್ರಾರ್ಥನೆ!

Srinivas Rao BV

ಗುವಾಹಟಿ: ಚುನಾವಣೆ ಅಥವಾ ಮತ ಎಣಿಕೆ ದಿನಾಂಕ ಬಂತೆಂದರೆ, ತಮ್ಮ ನೆಚ್ಚಿನ ರಾಜಕೀಯ ಪಕ್ಷ ಅಥವಾ ನೆಚ್ಚಿನ ಅಭ್ಯರ್ಥಿಗಳಿಗೆ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯದ ಸಂಗತಿ, ಆದರೆ ಮಿಜೊರಾಮ್ ನಲ್ಲಿ ಮತ ಎಣಿಕೆ ದಿನಾಂಕವನ್ನೇ ಬದಲು ಮಾಡುವುದಕ್ಕೆ ಮಂದಿ ದೇವರ ಮೊರೆ ಹೋಗಿದ್ದಾರೆ. 

ಇದಕ್ಕೆ ಕಾರಣ ಭಾನುವಾರ...!  ಮಿಜೊರಾಮ್ ಕ್ರೈಸ್ತ ಮತ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯ. ಕ್ರೈಸ್ತರಿಗೆ ಭಾನುವಾರ ವಿಶೇಷ ದಿನವಾಗಿದ್ದು ಬಹುತೇಕ ಮಂದಿ ಚರ್ಚ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ಕಡ್ಡಾಯವಾಗಿದೆ.

ನವಂಬರ್ 7 ರಂದು ಚುನಾವಣೆ ನಡೆದಿರುವ ಮಿಜೊರಾಮ್ ನಲ್ಲಿ ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.   

ನಿವೃತ್ತ ಪಾಸ್ಟರ್ ಆಗಿರುವ ರೆವರೆಂಡ್ ಕೆಸಿ ವನಲಾಲ್ದುಹಾ, ಭಾನುವಾರದಂದು ಮತ ಎಣಿಕೆ ನಿಗದಿಯಾಗಿರುವುದು ಹಲವರಲ್ಲಿ ಅಸಮಾಧಾನ ಮೂಡಿಸಿದೆ. ಭಾನುವಾರದಂದು ಚರ್ಚ್ ಸೇವೆಗಳು ದಿನದ ಮೂರು ಹೊತ್ತು ನಡೆಯುತ್ತವೆ. ಅದೇ ದಿನ ಮತ ಎಣಿಕೆಯೂ ನಡೆದರೆ, ಈ ಪ್ರಕ್ರಿಯೆಯಿಂದಾಗಿ ಹಲವರಿಗೆ ಚರ್ಚ್ ಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
 
ನಮ್ಮ ಮನವಿಗೆ ಸ್ಪಂದಿಸಿರುವ ನಮ್ಮ ಸದಸ್ಯರು ರಾಜ್ಯಾದ್ಯಂತ ನ.26 ರಂದು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ರೆವರೆಂಡ್ ವನಲಾಲ್ದುಹಾ ಹೇಳಿದ್ದಾರೆ.

ಮಿಜೋರಾಂ ಎನ್‌ಜಿಒ ಸಮನ್ವಯ ಸಮಿತಿಯ ನಿಯೋಗವೊಂದು ಪ್ರಸ್ತುತ ನವದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಮಂಗಳವಾರ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಪಡೆದುಕೊಂಡಿದೆ. ಇದಕ್ಕೂ ಮೊದಲು, ಚರ್ಚ್ ಸಂಘಟನೆಯಾದ ಮಿಜೋರಾಂ ಕೊಹ್ರಾನ್ ಹ್ರುಯಿತುಟ್ ಸಮಿತಿಯು ರಾಜ್ಯದ ಚರ್ಚ್‌ಗಳನ್ನು ಪ್ರಾರ್ಥನೆಯ ಮೂಲಕ ಮತ ಎಣಿಕೆ ದಿನಾಂಕ ಬದಲಾವಣೆಗೆ ದೇವರ ಮೊರೆ ಹೋಗಿತ್ತು.

ಚುನಾವಣಾ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ, ಎಣಿಕೆ ದಿನಾಂಕವನ್ನು ಬದಲಾಯಿಸುವಂತೆ ಚುನಾವಣಾ ಆಯೋಗಕ್ಕೆ ಹಲವು ಮನವಿಗಳನ್ನು ಕಳುಹಿಸಲಾಗಿದ್ದು, ಯಾವುದೇ ಪ್ರಯೋಜನವಾಗಿರಲಿಲ್ಲ.

SCROLL FOR NEXT