ದೇಶ

ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಕೆಟಿಆರ್ ಹೇಳಿಕೆ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ

Ramyashree GN

ಹೈದರಾಬಾದ್: ಕರ್ನಾಟಕ ಸರ್ಕಾರ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂಬ ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕೆಟಿಆರ್ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ತಿರಸ್ಕರಿಸಿದ್ದಾರೆ. ನಾವು 5 ಭರವಸೆಗಳನ್ನು ಜಾರಿಗೆ ತರಲು ನಿರ್ಧರಿಸಿದ್ದೆವು ಮತ್ತು ಮೊದಲು ಸಂಪುಟ ಸಭೆಯಲ್ಲೇ ಆದೇಶಗಳನ್ನು ಹೊರಡಿಸಿದ್ದೇವೆ ಎಂದು ಹೇಳಿದರು.

ಇದಕ್ಕೂ ಮೊದಲು, ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ (ಕೆಟಿಆರ್), 'ಟ್ರೇಲ್‌ಬ್ಲೇಜರ್ ತೆಲಂಗಾಣ' ಪ್ರಸ್ತುತಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೆ ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರದ ಅಡಿಯಲ್ಲಿ ತೆಲಂಗಾಣ ರಾಜ್ಯವು ಪ್ರವರ್ಧಮಾನಕ್ಕೆ ಬಂದಿದೆ ಎಂದು ಪ್ರತಿಪಾದಿಸಿದರು.

'ತೆಲಂಗಾಣದಲ್ಲಿ ರೈತರಿಗೆ 24 ಗಂಟೆ ವಿದ್ಯುತ್ ನೀಡುತ್ತಿರುವ ಏಕೈಕ ಸರ್ಕಾರ ಕೆಸಿಆರ್ ಸರ್ಕಾರ’ ಎಂದ ಕೆಟಿಆರ್, ‘ನಿಮಗೆ ಕರೆಂಟ್ ಬೇಕಾ ಕಾಂಗ್ರೆಸ್ ಬೇಕಾ? ಎಂದು ಪ್ರಶ್ನಿಸಿದ್ದರು.

'ಕರ್ನಾಟಕದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಭರವಸೆಗಳನ್ನು ಜಾರಿಗೊಳಿಸಿಲ್ಲ ಎಂದು ಕೆಲವರು ಹೇಳುವುದನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ತೆಲಂಗಾಣ ಸಿಎಂ, ಅವರ ಮಗ ಮತ್ತು ಬಿಜೆಪಿಯ ಇತರ ನಾಯಕರು ಹೀಗೆ ಹೇಳಿದ್ದಾರೆ. ಆದರೆ, ಅದು ನಿಜವಲ್ಲ. ನಾವು ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದೆವು. ಅದೇ ದಿನ ಕ್ಯಾಬಿನೆಟ್ ಹಾಲ್‌ಗೆ ತೆರಳಿ 5 ಖಾತರಿಗಳನ್ನು ಜಾರಿಗೆ ತರಲು ನಿರ್ಣಯ ಕೈಗೊಂಡೆವು ಮತ್ತು ಅದೇ ದಿನ ಆದೇಶ ಹೊರಡಿಸಲಾಗಿದೆ. ಆದರೆ, ಅದನ್ನು ಜಾರಿಗೆ ತರಲು ಸ್ವಲ್ಪ ಸಮಯ ಹಿಡಿಯಿತು' ಎಂದು ಸಿದ್ದರಾಮಯ್ಯ ಹೇಳಿದರು.

'ಜೂನ್ 11 ರಂದು ಮೊದಲ ಗ್ಯಾರಂಟಿಯಾದ ಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇತ್ತೀಚೆಗೆ 100 ಕೋಟಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವ ಮೈಲಿಗಲ್ಲನ್ನು ನಾವು ಆಚರಿಸಿದ್ದೇವೆ. ಇಂದು ಪ್ರತಿದಿನ 61-62 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಜಾತಿ ಅಥವಾ ಧರ್ಮದಿಂದ ನಾವು ಮಹಿಳೆಯರನ್ನು ಪ್ರತ್ಯೇಕಿಸಿಲ್ಲ.  ಮಹಿಳೆಯರು ತುಂಬಾ ಸಂತೋಷವಾಗಿದ್ದಾರೆ' ಎಂದು ಸಿಎಂ ಹೇಳಿದರು.

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಮಗೆ ಅಕ್ಕಿ ನೀಡಲು ಎಫ್‌ಸಿಐ ನಿರಾಕರಿಸಿದ ಕಾರಣ, ಕರ್ನಾಟಕ ಸರ್ಕಾರವು ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಿದೆ. ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು ಮತ್ತು ಮೊದಲಿಗೆ ಎಫ್‌ಸಿಐ ನಮಗೆ ಅಕ್ಕಿ ನೀಡಲು ಒಪ್ಪಿತ್ತು. ಅವರು ಕೇಳಿದ ಹಣ ಪಾವತಿಸಲು ನಾವು ಸಿದ್ಧರಿದ್ದೆವು. ಆದರೆ, ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಎಫ್‌ಸಿಐ ನಮಗೆ ಅಕ್ಕಿ ನೀಡಲು ನಿರಾಕರಿಸಿತು. ಆದರೆ, ನಾವು ಅಕ್ಕಿ ಬದಲಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಲು ನಿರ್ಧರಿದೆವು' ಎಂದು ಸಿದ್ದರಾಮಯ್ಯ ಹೇಳಿದರು.

ಜುಲೈನಲ್ಲಿ ಗೃಹ ಜ್ಯೋತಿ ಯೋಜನೆ ಆರಂಭವಾಗಿದೆ. ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ವಾರ್ಷಿಕ ಸರಾಸರಿ ಬಳಕೆಗೆ ಶೇ 10 ರಷ್ಟು ಹೆಚ್ಚುವರಿ ವಿದ್ಯುತ್ ಬಳಕೆಯನ್ನು ಉಚಿತವಾಗಿ ನೀಡಲಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ 1 ಕೋಟಿ 14 ಲಕ್ಷ ಫಲಾನುಭವಿಗಳು ಸವಲತ್ತು ಪಡೆಯುತ್ತಿದ್ದಾರೆ. ಪ್ರತಿ ಮಹಿಳೆಯ ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುತ್ತಿದ್ದೇವೆ. ಡಿಸೆಂಬರ್ ವೇಳೆಗೆ 1 ಕೋಟಿ 17 ಲಕ್ಷ ಮಹಿಳೆಯರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದರು.

SCROLL FOR NEXT