ಹೈದರಾಬಾದ್: ತೆಲಂಗಾಣದಲ್ಲಿ ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಮತ್ತು ಇತರ ಪ್ರಮುಖ ನಾಯಕರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ 'ಡೀಪ್‌ಫೇಕ್' ತಂತ್ರಜ್ಞಾನವನ್ನು ಬಳಸಿ ನಕಲಿ ಸುದ್ದಿಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿ ಬಿಆರ್‌ಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮುಖ್ಯ ಚುನಾವಣಾ ಆಯುಕ್ತರು, ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ಮತ್ತು ರಾಜ್ಯ ಡಿಜಿಪಿ ಅವರಿಗೆ ಬುಧವಾರ ನೀಡಿದ ದೂರಿನಲ್ಲಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) 'ಡೀಪ್‌ಫೇಕ್' ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ನಕಲಿ ಆಡಿಯೋ ಮತ್ತು ವಿಡಿಯೋಗಳನ್ನು ಸೃಷ್ಟಿಸಿ, ಪ್ರಸರಣದಲ್ಲಿ ತೊಡಗಿಸಿಕೊಂಡಿದೆ ಎಂದು ವಿಶ್ವಾಸಾರ್ಹ ಮೂಲಗಳು ಮಾಹಿತಿ ನೀಡಿವೆ ಎಂದು ಬಿಆರ್‌ಎಸ್ ಹೇಳಿದೆ.
ಕೆಸಿಆರ್, ಕೆಟಿ ರಾಮರಾವ್, ಸಚಿವ ಹರೀಶ್ ರಾವ್, ಎಂಎಲ್‌ಸಿ ಕೆ ಕವಿತಾ ಸೇರಿದಂತೆ ಬಿಆರ್‌ಎಸ್‌ನ ಪ್ರಮುಖ ನಾಯಕರು ಮತ್ತು ಪಕ್ಷದ ಇತರ ಅಭ್ಯರ್ಥಿಗಳನ್ನು ಕಾಂಗ್ರೆಸ್ ಗುರಿಯಾಗಿಸಿಕೊಂಡಿದೆ. ಅವರ ವಿರುದ್ಧ ಇಲ್ಲಸಲ್ಲದ ವಿಚಾರಗಳನ್ನು ಹೇಳಲಾಗಿದೆ ಎಂದು ಅದು ಹೇಳಿದೆ.
ಟಿಪಿಸಿಸಿಯಿಂದ ತಂತ್ರಜ್ಞಾನದ ಕಾನೂನುಬಾಹಿರ ಬಳಕೆಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಬಿಆರ್‌ಎಸ್ ಕೋರಿದೆ.
ಇದನ್ನೂ ಓದಿ: ತೆಲಂಗಾಣ ಚುನಾವಣೆ: ಮಾದರಿ ನೀತಿ ಸಂಹಿತೆ ಉಲ್ಲಂಘನೆ; ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ವಿರುದ್ಧ ದೂರು ದಾಖಲು!
'ಈ ವಿಷಯವು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಚಿತ್ರ, ವಿಡಿಯೋಗಳು ಮತ್ತು ಮೀಮ್‌ಗಳು ಸೇರಿದಂತೆ ಇಂತಹ ತಪ್ಪುದಾರಿಗೆಳೆಯುವ ವಿಚಾರಗಳನ್ನು ಸೃಷ್ಟಿಸಿ, ಪ್ರಚಾರ ಮಾಡುತ್ತಿರುವುದರಿಂದ ಟಿಪಿಸಿಸಿ ಮತ್ತು ಅದರ ವಿವಿಧ ಕಾನೂನು, ಕಾನೂನಾತ್ಮಕವಲ್ಲದ ಮತ್ತು ಅದೃಶ್ಯ ನಿರ್ವಾಹಕರನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ' ಎಂದು ಬಿಆರ್‌ಎಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೆ ಕವಿತಾ, 'ಆತ್ಮೀಯ ಮತದಾರರೇ, ಜಾಗರೂಕರಾಗಿರಿ! ಹತಾಶ ಪಕ್ಷಗಳು ತೆಲಂಗಾಣದಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತಿವೆ! ನಕಲಿ ಸುದ್ದಿಗಳು ನಿಮ್ಮ ನಿರ್ಧಾರಗಳನ್ನು ಬದಲಿಸಲು ಬಿಡಬೇಡಿ. ಅಂತಹ ವಿಚಾರಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಆ ಮಾಹಿತಿಯನ್ನು ಪರಿಶೀಲಿಸಿ. ನಮ್ಮ ಪ್ರಜಾಪ್ರಭುತ್ವವು ತಿಳುವಳಿಕೆಯುಳ್ಳ ಆಯ್ಕೆಗಳ ಮೇಲೆ ಅಭಿವೃದ್ಧಿ ಹೊಂದುತ್ತದೆ, ತಪ್ಪು ಮಾಹಿತಿಯಿಂದಲ್ಲ' ಎಂದಿದ್ದಾರೆ.