ದೇಶ

ಸಿಕ್ಕಿಂ ಪ್ರವಾಹದಲ್ಲಿ 10 ಮಂದಿ ಸಾವು: 22 ಸೇನಾ ಯೋಧರು ಸೇರಿದಂತೆ 81 ಮಂದಿ ನಾಪತ್ತೆ!

Vishwanath S

ಗುವಾಹಟಿ: ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಮೇಲೆ ಬುಧವಾರ ನಸುಕಿನ ಜಾವ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದಾಗಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.

22 ಸೇನಾ ಸಿಬ್ಬಂದಿ ಸೇರಿದಂತೆ 81 ಮಂದಿ ನಾಪತ್ತೆಯಾಗಿದ್ದು, 26 ಮಂದಿ ಗಾಯಗೊಂಡಿದ್ದಾರೆ. ನಾಪತ್ತೆಯಾದವರ ಪತ್ತೆಗೆ ವ್ಯಾಪಕ ಶೋಧ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹವು ಹನ್ನೆರಡು ಪ್ರಮುಖ ರಸ್ತೆಗಳು ಮತ್ತು ಸೇತುವೆಗೆ ಹಾನಿಯಾಗಿದ್ದು ಹಲವು ಕೊಚ್ಚಿ ಹೋಗಿದೆ. ತೀಸ್ತಾ ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದು ಸಾಧ್ಯವಿರುವ ಎಲ್ಲ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಮಂಗನ್ ಜಿಲ್ಲೆಯ ಚುಂಗ್‌ತಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ ನಂತರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಾಪತ್ತೆಯಾಗಿರುವ 23 ಸೇನಾ ಯೋಧರಲ್ಲಿ ಒಬ್ಬರನ್ನು ರಕ್ಷಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ನೀಡಿದೆ.

ಸಿಕ್ಕಿಂ ಮತ್ತು ಉತ್ತರ ಬಂಗಾಳದಲ್ಲಿ ನಿಯೋಜಿಸಲಾದ ಇತರ ಎಲ್ಲಾ ಭಾರತೀಯ ಸೇನೆಯ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಮೊಬೈಲ್ ಸಂವಹನದ ಅಡಚಣೆಯಿಂದಾಗಿ ಅವರು ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ತಿಳಿಸಿದೆ.

ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆಗಳನ್ನು ನಿಯೋಜಿಸಲಾಗಿದೆ. 11,000ಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದು ಅಧಿಕಾರಿಗಳು ಕೆಲವು ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದಾರೆ.

SCROLL FOR NEXT