ದೇಶ

ಸೇನಾ ಶಿಬಿರದಲ್ಲಿ ಮೇಜರ್ ಗುಂಡಿನ ದಾಳಿ, ಗ್ರೆನೇಡ್‌ ಸ್ಫೋಟದಿಂದ ಐವರು ಯೋಧರು ಗಾಯ

Nagaraja AB

ರಜೌರಿ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಶಿಬಿರವೊಂದರಲ್ಲಿ ಗುರುವಾರ ಅಧಿಕಾರಿಯೊಬ್ಬರು ಗುಂಡು ಹಾರಿಸಿ ಗ್ರೆನೇಡ್‌ಗಳನ್ನು ಸ್ಫೋಟಿಸಿದ ಕಾರಣ ಮೂವರು ಅಧಿಕಾರಿಗಳು ಸೇರಿದಂತೆ ಕನಿಷ್ಠ ಐವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೇಜರ್ ದರ್ಜೆಯ  ಅಧಿಕಾರಿಯು ಶೂಟಿಂಗ್ ಅಭ್ಯಾಸದ ಸಮಯದಲ್ಲಿ ತನ್ನ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು,  ನಂತರ ಘಟಕದ ಶಸ್ತ್ರಾಗಾರದಲ್ಲಿ ಆಶ್ರಯ ಪಡೆದಿದ್ದರು. ನಂತರ ಶರಣಾಗುವಂತೆ ಮನವೊಲಿಸುವ ಪ್ರಯತ್ನದಲ್ಲಿ ಕಟ್ಟಡದ ಬಳಿ ತೆರಳಿದ ತನ್ನ ಮೇಲಾಧಿಕಾರಿಗಳ ಮೇಲೆ ಗ್ರೆನೇಡ್‌ ಎಸೆದಿದ್ದರು ಎಂದು ಮೂಲಗಳು ತಿಳಿಸಿವೆ. 

ಅಧಿಕಾರಿಯನ್ನು ಮನವೊಲಿಸುವ ಮೊದಲು ಶಸ್ತ್ರಗಾರದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿಯಿತ್ತು. ಮುಂಜಾಗ್ರತಾ ಕ್ರಮವಾಗಿ ಶಸ್ತ್ರಾಗಾರದ ಸಮೀಪದಲ್ಲಿರುವ ಗ್ರಾಮವನ್ನು ಸೇನೆ ಸ್ಥಳಾಂತರಿಸಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಆದಾಗ್ಯೂ, ಸೇನಾ ಶಿಬಿರದಲ್ಲಿ ನಡೆದ ಗ್ರೆನೇಡ್ ಅಪಘಾತದಲ್ಲಿ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ಹೇಳಿಕೊಂಡಿದೆ.

ಶಿಬಿರದಲ್ಲಿ ಕಳೆದ ಹಲವು ದಿನಗಳಿಂದ ಗುಂಡು ಹಾರಿಸುವ ಅಭ್ಯಾಸ ನಡೆಯುತ್ತಿದ್ದು, ಆರೋಪಿ ಅಧಿಕಾರಿ ಗುರುವಾರ ಯಾವುದೇ ಪ್ರಚೋದನೆ ಇಲ್ಲದೆ ತನ್ನ ಸಹೋದ್ಯೋಗಿಗಳು ಮತ್ತು ಅಧೀನ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದು, ನಂತರ, ಅವರು ಶಿಬಿರದ ಶಸ್ತ್ರಾಗಾರದೊಳಗೆ ಆಶ್ರಯ ಪಡೆದಿದ್ದರು. ಶರಣಾಗುವಂತೆ ಮನವೊಲಿಸುವ ಪ್ರಯತ್ನದಲ್ಲಿಆರೋಪಿ  ಗ್ರೆನೇಡ್ ಎಸೆದಿದ್ದರಿಂದ ಮೂವರು ಅಧಿಕಾರಿಗಳು ಗಾಯಗೊಂಡರು ಎಂದು ಅವರು ತಿಳಿಸಿದ್ದಾರೆ. 

ರಾತ್ರಿ 11 ಗಂಟೆ ಸುಮಾರಿನಲ್ಲಿ ಆರೋಪಿ ಮನಬಂದಂತೆ ನಡೆಸಿದ  ಗುಂಡಿನ ದಾಳಿಯಲ್ಲಿ ಮತ್ತಿಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

SCROLL FOR NEXT