ದೇಶ

ವಾಣಿಜ್ಯ ನಗರಿ ಮುಂಬೈಯಲ್ಲಿ ಘೋರ ಅಗ್ನಿ ದುರಂತ: ಬಹುಮಹಡಿ ಕಟ್ಟಡಕ್ಕೆ ಬೆಂಕಿ ಹೊತ್ತಿ 7 ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

Sumana Upadhyaya

ಮುಂಬೈ: ಶುಕ್ರವಾರ ನಸುಕಿನ ಜಾವ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಅಪ್ರಾಪ್ತರು ಸೇರಿದಂತೆ ಏಳು ಜನರು ಮೃತಪಟ್ಟು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

30 ನಿವಾಸಿಗಳನ್ನು ಟೆರೇಸ್ ಮತ್ತು ನೆಲಮಹಡಿ ಸೇರಿದಂತೆ 7 ರಚನೆಯ ವಿವಿಧ ಮಹಡಿಗಳಿಂದ ರಕ್ಷಿಸಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (BMC) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋರೆಗಾಂವ್ ಪಶ್ಚಿಮದಲ್ಲಿರುವ ಜೈ ಸಂದೇಶ್ ಕಟ್ಟಡದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ. ಬೆಂಕಿಗೆ ಆಹುತಿಯಾದ ವ್ಯಕ್ತಿಗಳನ್ನು ಜೋಗೇಶ್ವರಿಯಲ್ಲಿರುವ ಟ್ರಾಮಾ ಸೆಂಟರ್ ಮತ್ತು ಜುಹೂನಲ್ಲಿರುವ ಸಿವಿಕ್-ರನ್ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು. ಅವರಲ್ಲಿ ಇಬ್ಬರು ಅಪ್ರಾಪ್ತರು ಮತ್ತು ಮಹಿಳೆಯರು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ.

ಚಿಕಿತ್ಸೆ ವೇಳೆ ಮತ್ತೋರ್ವ ಮೃತಪಟ್ಟಿದ್ದು, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುವ ಮೊದಲು, ಬೆಂಕಿಯು ಎಲ್ಲಾ ಕಡೆಯಿಂದ ಕಟ್ಟಡವನ್ನು ಆವರಿಸಿದೆ. ನೆಲಮಹಡಿಯಲ್ಲಿದ್ದ ಅಂಗಡಿಗಳು, ಸ್ಕ್ರ್ಯಾಪ್ ವಸ್ತುಗಳು ಮತ್ತು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಬೆಂಕಿ ನಂದಿಸಲು ಸುಮಾರು ಮೂರು ಗಂಟೆ ಬೇಕಾಯಿತು. ಕಾರ್ಯಾಚರಣೆಯಲ್ಲಿ ಎಂಟಕ್ಕೂ ಹೆಚ್ಚು ಅಗ್ನಿಶಾಮಕ ಯಂತ್ರಗಳು ಮತ್ತು ಇತರ ಅಗ್ನಿಶಾಮಕ ಉಪಕರಣಗಳನ್ನು ಬಳಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಕೆಲವು ಸಂತ್ರಸ್ತರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಪೌರ ಆಯುಕ್ತ ಇಕ್ಬಾಲ್ ಸಿಂಗ್ ಚಹಾಲ್ ಅವರು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗಳಿಗೆ ಸ್ವಲ್ಪ ಸಮಯದ ನಂತರ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT