ಲಖನೌ: ಆಗಸ್ಟ್‌ನಲ್ಲಿ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿದ್ದ ಉತ್ತರ ಪ್ರದೇಶದ ಮಾಜಿ ಶಾಸಕ ಇಮ್ರಾನ್ ಮಸೂದ್ ಅವರು ಶನಿವಾರ ಕಾಂಗ್ರೆಸ್‌ಗೆ ಮರಳಿದ್ದು, "ಘರ್ ವಾಪ್ಸಿ" ಎಂದು 'ಕೈ' ಬಣ್ಣಿಸಿದೆ.
ಕಳೆದ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ, ಮಸೂದ್ 2022ರ ಜನವರಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಆದರೆ ಚುನಾವಣೆಯ ನಂತರ ಬಿಎಸ್‌ಪಿಗೆ ಹೋಗಿದ್ದರು.
2007ರಲ್ಲಿ ಸಹರಾನ್‌ಪುರ ಜಿಲ್ಲೆಯ ಮುಜಫರಾಬಾದ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮಸೂದ್ ಅವರು ಈಗ ಮತ್ತೆ ಕಾಂಗ್ರೆಸ್ ಸೇರಿದ್ದು, "ಸಾಯುವವರೆಗೂ" ಕಾಂಗ್ರೆಸ್ ತೊರೆಯುವುದಿಲ್ಲ ಎಂದು ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನಿರಾಸೆಗೊಳಿಸಿದ್ದಕ್ಕಾಗಿ ಕ್ಷಮೆಯಾಚಿಸುವುದಾಗಿಯೂ ಮಸೂದ್ ಹೇಳಿದ್ದಾರೆ.
ಮಸೂದ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ, ಇದು ಮಸೂದ್ ಅವರ "ಘರ್ ವಾಪ್ಸಿ"(ಮನೆಗೆ ಮರಳುವುದು) ಎಂದು ಹೇಳಿದರು ಮತ್ತು ಅವರು ಮತ್ತೆ ಪಕ್ಷವನ್ನು ತೊರೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಾಗಿ ತಿಳಿಸಿದರು.