ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪಕ್ಷವು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಜನರ ಬಳಿಗೆ ಹೋಗುತ್ತದೆ ಮತ್ತು ಸಾರ್ವಜನಿಕ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಪ್ರಗತಿಪರ ಅಭಿವೃದ್ಧಿಯನ್ನು ಭರವಸೆಯಾಗಿ ನೀಡುತ್ತದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ತಿಳಿಸಿದ್ದಾರೆ.
'5 ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗುವುದರೊಂದಿಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿದಾಯವನ್ನೂ ಘೋಷಿಸಲಾಗಿದೆ' ಎಂದಿದ್ದಾರೆ.
ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಜನರ ಬಳಿಗೆ ಹೋಗಲಿದೆ. ಸಾರ್ವಜನಿಕ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಪ್ರಗತಿಪರ ಅಭಿವೃದ್ಧಿಯು ಕಾಂಗ್ರೆಸ್ ಪಕ್ಷದ ಭರವಸೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ: ಛತ್ತೀಸ್ ಘಡದಲ್ಲಿ 2 ಹಂತ, ಉಳಿದ 4 ರಾಜ್ಯಗಳಲ್ಲಿ ಒಂದೇ ಹಂತದ ಮತದಾನ, ಡಿಸೆಂಬರ್ 3ರಂದು ಫಲಿತಾಂಶ
ಐದು ರಾಜ್ಯಗಳಾದ ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ನವೆಂಬರ್ 7ರಿಂದ 30ರವರೆಗೆ ವಿವಿಧ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಇದು ಸೆಮಿಫೈನಲ್ ಎಂದೇ ಬಿಂಬಿಸಲಾಗುತ್ತಿದೆ.