ನವದೆಹಲಿ: ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಭ್ರಷ್ಟಾಚಾರವೇ ಕಾಂಗ್ರೆಸ್ ಪಕ್ಷದ ಅವಿರತ ಗುರಿ ಮತ್ತು ಉದ್ದೇಶ ಎಂದು ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಗುತ್ತಿಗೆದಾರ ಆರ್. ಅಂಬಿಕಾಪತಿ ಎಂಬುವವರ ಮನೆ ಮೇಲೆ ಐಟಿ ದಾಳಿ ನಡೆಸಿದಾಗ ಲೆಕ್ಕಕ್ಕೆ ಸಿಗದ 42 ಕೋಟಿ ರೂ. ಹಣ ಪತ್ತೆಯಾಗಿದೆ. ಐಟಿ ಅಧಿಕಾರಿಗಳು 42 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಅಂಬಿಕಾಪತಿ ಅವರು ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದು, ಆಗಿನ ಬಿಜೆಪಿ ಸರ್ಕಾರವು ಸಿವಿಲ್ ಗುತ್ತಿಗೆದಾರರಿಂದ ಶೇ 40 ರಷ್ಟು ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದ ಪ್ರಮುಖ ಧ್ವನಿಯಾಗಿದ್ದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜೀವ್ ಚಂದ್ರಶೇಖರ್, 'ಕಾಂಗ್ರೆಸ್‌ನ ಡಿಎನ್‌ಎಯಲ್ಲಿ ಭ್ರಷ್ಟಾಚಾರ ಅಡಕವಾಗಿದೆ. ಇದು ಅವರ ನಿರಂತರ ಗುರಿ ಮತ್ತು ಉದ್ದೇಶವಾಗಿದೆ. ಅಂಬಿಕಾಪತಿ ಅವರು 2022ರ ಜುಲೈನಲ್ಲಿ ಕಾಂಗ್ರೆಸ್ ಪರವಾಗಿ ಶೇ 40ರಷ್ಟು ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದರು. ಅವರು ಮತ್ತು ಅವರ ಗುಂಪು ಬಿಜೆಪಿ ಸರ್ಕಾರದಲ್ಲಿ ಶೇ 40ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ದುರದೃಷ್ಟವಶಾತ್, ಕರ್ನಾಟಕದ ಮತದಾರರು ಇದನ್ನು ನಂಬಿ ದಾರಿ ತಪ್ಪಿದ್ದಾರೆ. ನಿನ್ನೆ ಅಂಬಿಕಾಪತಿ ಅವರ ಮನೆಯಲ್ಲಿ 42 ಕೋಟಿ ರೂ. ಪತ್ತೆಯಾಗಿದೆ' ಎಂದು ದೂರಿದರು.
ರಾಹುಲ್ ಗಾಂಧಿ ವಿರುದ್ಧ ಕಟು ವಾಗ್ದಾಳಿ ನಡೆಸಿದ ಅವರು, ಇಂಡಿಯಾ ಮೈತ್ರಿಕೂಟಕ್ಕೆ ಇಂಡಿ ಲೂಟೋ ಯಾತ್ರೆ (INDI Looto Yatra) ಎಂದು ಹೆಸರಿಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಹೌಹಾರಿದ ಅಧಿಕಾರಿಗಳು: ಬೆಡ್ ರೂಮ್ ಮಂಚದ ಕೆಳಗೆ 42 ಕೋಟಿ ರೂ. ಹಣ ಪತ್ತೆ!
'ಭಾರತ್ ಜೋಡೋ ಬಗ್ಗೆ ಮಾತನಾಡುವ ಮತ್ತು ಯುಪಿಎ ಹೆಸರನ್ನು ಇಂಡಿಯಾ (INDIA) ಎಂದು ಬದಲಾಯಿಸಿರುವ ಅವರ ನಾಯಕ, ಅದನ್ನು 'ಇಂಡಿ ಲೂಟೋ ಯಾತ್ರೆ' ಎಂದು ಮರುನಾಮಕರಣ ಮಾಡಬೇಕು. ಅದರ ಪುರಾವೆ ನಿನ್ನೆ ಅಂಬಿಕಾಪತಿ ಅವರ ಮನೆಯಿಂದ ನಮಗೆ ಸಿಕ್ಕಿತು. ನಾವು (ಬಿಜೆಪಿ) ಜಾಹೀರಾತು ಹಾಕಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದು ಹಣ ಹೂಡುವ ಎಟಿಎಂ ಆಗಲಿದೆ. ರಾಜ್ಯವು ಇಂದು ತೆಲಂಗಾಣ ಮತ್ತು ಮಧ್ಯ ಪ್ರದೇಶದ ಚುನಾವಣೆಗೆ ಹಣ ನೀಡುತ್ತಿದೆ. ಇದು ಕರ್ನಾಟಕದ ಜನರ ದುರದೃಷ್ಟಕರ' ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.
ಅಂಬಿಕಾಪತಿ ಅವರ ನಿವಾಸದಲ್ಲಿ ಪತ್ತೆಯಾಗಿರುವ ನಗದು ರಾಶಿ ರಾಶಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಇನ್ನಷ್ಟು ಜನರ ಹೆಸರು ಬಹಿರಂಗಗೊಳ್ಳಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಐಟಿ ದಾಳಿಯಲ್ಲಿ ಸಿಕ್ಕಿದ್ದು ಕಮಿಷನ್ ಹಣ, ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ತೆಗೆದಿಟ್ಟ ಹಣ; ಬಿಜೆಪಿ, ಜೆಡಿಎಸ್ ಆರೋಪ
'ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಮತ್ತೊಂದು ಉದಾಹರಣೆಯೆಂದರೆ, ಕರ್ನಾಟಕದ ಖ್ಯಾತ ಸರೋದ್ ವಾದಕ ಪಂಡಿತ್ ತಾರಾ ನಾಥ್ ಅವರನ್ನು ಕಾಂಗ್ರೆಸ್ ಸರ್ಕಾರ ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಸರ್ಕಾರಿ ಅಧಿಕಾರಿಗಳು ಅವರ ಮನೆಗೆ ಹೋಗಿದ್ದಾರೆ ಮತ್ತು ನಿಮ್ಮ ಶುಲ್ಕವನ್ನು ಹೆಚ್ಚಿಸುತ್ತೇವೆ. ಆದರೆ, ನಿಮಗೆ ಸಿಲುವ ಹೆಚ್ಚುವರಿ ಹಣವನ್ನು ನಮ್ಮ ಸಚಿವರಿಗೆ ಹಿಂತಿರುಗಿಸಬೇಕಾಗುತ್ತದೆ ಎಂದಿದ್ದಾರೆ' ಎಂದು ಅವರು ಆರೋಪಿಸಿದರು.