ದೇಶ

ಪ್ರಜಾಪ್ರಭುತ್ವ ಉಳಿಸಲು ಮೋಹನ್ ಭಾಗವತ್ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಬೇಕು: ಸಂಜಯ್ ರಾವುತ್

Ramyashree GN

ಮುಂಬೈ: ದೇಶದಲ್ಲಿ 'ಪ್ರಜಾಪ್ರಭುತ್ವವನ್ನು ಉಳಿಸಲು' ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ನೀಡಬೇಕು ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಮಂಗಳವಾರ ಹೇಳಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ 'ವಿಜಯದಶಮಿ ಉತ್ಸವ'ದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್, 'ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಕೆಲವು ಜನರಿದ್ದಾರೆ. ಅವರು ಭಾರತವು ಅಭಿವೃದ್ಧಿಯಾಗಲಿ ಎಂದು ಬಯಸುವುದಿಲ್ಲ. ಅವರು ಸಮಾಜದಲ್ಲಿ ಬಣಗಳನ್ನು ಮತ್ತು ಘರ್ಷಣೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ' ಎಂದಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿದ ರಾವುತ್, ಮೋಹನ್ ಭಾಗವತ್ ಅವರು ಪ್ರತಿಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಈ ಹೇಳಿಕೆ ನೀಡಿದ್ದರೆ, ದೇಶದ ಪ್ರಜಾಪ್ರಭುತ್ವವು ಇಂದು ಅಪಾಯದಲ್ಲಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ಸೇರುವ ಮೊದಲ ವ್ಯಕ್ತಿ ಅವರೇ ಆಗಿರಬೇಕು ಎಂದಿದ್ದಾರೆ.

ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಜನರು ಇಂಡಿಯಾ ಮೈತ್ರಿಕೂಟಕ್ಕೆ ಬಂದಿದ್ದಾರೆ ಮತ್ತು ಅವರು ಸರ್ವಾಧಿಕಾರದ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಮೋಹನ್ ಭಾಗವತ್ ಅವರು ದೇಶ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಬೇಕು ಎಂದು ಹೇಳಿದರು.

'ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಸಂಘದ ನಾಯಕರು ಜೈಲಿನಲ್ಲಿದ್ದರು. ಭಿನ್ನಾಭಿಪ್ರಾಯಗಳಿದ್ದವರು ಜೈಲಿನಲ್ಲಿದ್ದರು ಮತ್ತು ನಂತರ ಅವರೆಲ್ಲಾ ಭಾರತೀಯ ಜನತಾ ಪಕ್ಷದೊಂದಿಗೆ ಸೇರಿ ಜನತಾ ಪಕ್ಷವನ್ನು ಸ್ಥಾಪಿಸಿದರು ಮತ್ತು ಸರ್ವಾಧಿಕಾರವನ್ನು ಕೊನೆಗೊಳಿಸಿದರು. ನೀವು ಇದನ್ನು ತಿಳಿದುಕೊಳ್ಳಬೇಕು. ಗೊತ್ತಿಲ್ಲದಿದ್ದರೆ, ಲಾಲ್ ಕೃಷ್ಣ ಅಡ್ವಾಣಿ ಇನ್ನೂ ಜೀವಂತವಾಗಿದ್ದಾರೆ. ಅವರು ಕೂಡ ಜೈಲಿನಲ್ಲಿದ್ದರು. ಅಟಲ್ ಜಿ ಅವರನ್ನು ಜೈಲಿಗೆ ಕಳುಹಿಸಲಾಯಿತು. ಅವರ ಜೊತೆಗೆ ಜಯಪ್ರಕಾಶ್ ನಾರಾಯಣ್ ಸೇರಿದಂತೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಜನರು. ನಾವು ಮೋಹನ್ ಭಾಗವತ್ ಜಿ ಅವರಿಗೆ ಇದನ್ನು ಹೇಳಬೇಕಾಗಿದೆ. ಇದು ಈ ದೇಶದ ದೌರ್ಭಾಗ್ಯ' ಎಂದು ಅವರು ಹೇಳಿದರು.

'ನೀವು ಮಣಿಪುರದ ಬಗ್ಗೆ ಮಾತನಾಡಿದರೆ, ಲಡಾಖ್ ಬಗ್ಗೆಯೂ ಮಾತನಾಡಿ. ಇಂದು ದಸರಾ. ಇಂದು ಪವಿತ್ರ ದಿನ, ಪ್ರತಿಯೊಬ್ಬರೂ ಸತ್ಯವನ್ನು ಮಾತನಾಡಬೇಕು' ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಇಂದು ಮುಂಜಾನೆ ಮೋಹನ್ ಭಾಗವತ್ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ 'ವಿಜಯದಶಮಿ ಉತ್ಸವ'ದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, '... ಭಾರತವು ಮುಂದುವರಿಯಬೇಕು ಎಂದು ಬಯಸದ ಕೆಲವು ಜನರು ಜಗತ್ತಿನಲ್ಲಿ ಮತ್ತು ಭಾರತದಲ್ಲಿದ್ದಾರೆ. ಸಮಾಜದಲ್ಲಿ ಬಣಗಳನ್ನು ಮತ್ತು ಘರ್ಷಣೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ತಿಳಿಯದೆ ನಾವು ಕೆಲವೊಮ್ಮೆ ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ ಮತ್ತು ಅನಗತ್ಯ ತೊಂದರೆಗಳು ಎದುರಾಗುತ್ತವೆ. ಭಾರತವು ಪ್ರಗತಿಯಾದರೆ, ಅವರು ತಮ್ಮ ಆಟ ಆಡಲು ಸಾಧ್ಯವಾಗುವುದಿಲ್ಲ; ಹೀಗಾಗಿಯೇ ಅವರು ನಿರಂತರವಾಗಿ ವಿರೋಧಿಸುತ್ತಾರೆ. ವಿರೋಧಿಸುವ ಸಲುವಾಗಿಯೇ ಅವರು ನಿರ್ದಿಷ್ಟ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುತ್ತಾರೆ' ಎಂದು ದೂರಿದರು.

'ಮಣಿಪುರದಲ್ಲಿ, ಸಂಘರ್ಷದಲ್ಲಿ ತೊಡಗಿರುವ ಎರಡೂ ಕಡೆಯ ಜನರು ಶಾಂತಿಯನ್ನು ಬಯಸುತ್ತಿರುವಾಗ, ಆ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯನ್ನಿಟ್ಟ ತಕ್ಷಣ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವ ಈ ಶಕ್ತಿಗಳು ಯಾವುವು?. ಈ ಸಮಸ್ಯೆಯನ್ನು ಪರಿಹರಿಸಲು ಬಹು ಆಯಾಮದ ಪ್ರಯತ್ನಗಳು ಅಗತ್ಯವಿದೆ. ನಮಗೆ ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ದಕ್ಷತೆಯ ಅಗತ್ಯವಿದೆ. ಅದೇ ಸಮಯದಲ್ಲಿ, ಉದ್ಭವಿಸಿದ ಪರಸ್ಪರ ಅಪನಂಬಿಕೆಯ ಅಂತರವನ್ನು ಕಡಿಮೆ ಮಾಡುವಲ್ಲಿ ಸಮಾಜದ ಪ್ರಬುದ್ಧ ನಾಯಕತ್ವವು ವಿಶೇಷ ಪಾತ್ರ ವಹಿಸಬೇಕಾಗುತ್ತದೆ' ಎಂದರು. 

ಇಂಡಿಯಾ ಮೈತ್ರಿಕೂಟವು 28 ರಾಜಕೀಯ ಪಕ್ಷಗಳನ್ನು ಒಳಗೊಂಡಿದ್ದು, 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಲು ರಚಿಸಲಾಗಿದೆ.

SCROLL FOR NEXT