ದೇಶ

ಯಾವುದೇ ನಿಷೇಧ ಇಲ್ಲ, ಆದರೂ ಉತ್ತರಾಖಂಡದ ಈ ಹಳ್ಳಿಗಳಲ್ಲಿ ಯಾರೂ ಮದ್ಯ, ಡ್ರಗ್ಸ್ ಸೇವಿಸಲ್ಲ!

Lingaraj Badiger

ಡೆಹ್ರಾಡೂನ್: ಇತ್ತೀಚೆಗೆ ಎಲ್ಲಾ ಕಡೆಯೂ ಮದ್ಯಪಾನ ಮತ್ತು ಡ್ರಗ್ಸ್ ವ್ಯಸನದ ಹಾವಳಿ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಉತ್ತರಾಖಂಡದ ಡೆಹ್ರಾಡೂನ್‌ನ ಈ ಎರಡು ಗ್ರಾಮಗಳಲ್ಲಿ ಯಾವುೇದ ನಿಷೇಧ ಇಲ್ಲದಿದ್ದರೂ ಗ್ರಾಮಸ್ಥರು ಪೌರಾಣಿಕ ಸಂಪ್ರದಾಯವನ್ನು ಉಳಿಸಿಕೊಂಡು ತಮ್ಮ ಗ್ರಾಮಗಳಿಗೆ ಡ್ರಗ್ಸ್ ಮತ್ತು ಮದ್ಯ ಕಾಲಿಡದಂತೆ ನೋಡಿಕೊಂಡಿದ್ದಾರೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕಲ್ಸಿಯ ಮಾಜಿ ಮುಖ್ಯಸ್ಥ ಶಂಶೇರ್ ಸಿಂಗ್ ತೋಮರ್ ಅವರು, “ಡೆಹ್ರಾಡೂನ್‌ನಿಂದ 44 ಕಿಮೀ ದೂರದಲ್ಲಿರುವ ತಹಸಿಲ್ ಕಲ್ಸಿ ಪ್ರದೇಶದ ಕೋಟಾ ದಿಮೌ, ಗಡೋಲ್ ಮತ್ತು ಬೋಹ್ರಿ ಗ್ರಾಮಗಳ ಜನ ಮದ್ಯ ಅಥವಾ ಇತರ ಯಾವುದೇ ಡ್ರಗ್ಸ್ ಗಳನ್ನು ಸೇವಿಸುವುದಿಲ್ಲ ಎಂದಿದ್ದಾರೆ.

ಇದರ ಹಿಂದೆ ಯಾವುದೇ ನಿರ್ಬಂಧವಿಲ್ಲ. ಆದರೆ ಧಾರ್ಮಿಕ ನಂಬಿಕೆ ಇದೆ - ಎಲ್ಲಾ ಮೂರು ಗ್ರಾಮಗಳ ದೇವರು ಪರಶುರಾಮ ಮಹಾರಾಜನಾಗಿದ್ದು, ಮದ್ಯದ ನಿಯಮಗಳನ್ನು ಗ್ರಾಮಸ್ಥರು ಉಲ್ಲಂಘಿಸಿದರೆ ಭವಿಷ್ಯದಲ್ಲಿ ದೇವರ ಕೋಪಕ್ಕೆ ತುತ್ತಾಗಬೇಕಾಗುತ್ತದೆ" ಎಂಬ ಭಯ ಇದೆ ಎಂದು ತೋಮರ್ ಅವರು ಹೇಳಿದ್ದಾರೆ.

ಗ್ರಾಮದ ಜನಸಂಖ್ಯೆ ಸುಮಾರು ಮೂರು ಸಾವಿರ ಇದ್ದು, ಇಲ್ಲಿ ಮದ್ಯ ಸೇವಿಸುವುದು ಮತ್ತು ಮನೆಯಲ್ಲಿ ಮದ್ಯ ಸಂಗ್ರಹಿಸಲು ಸಹ ಯಾರೂ ಒಪ್ಪಿಕೊಳ್ಳವುದಿಲ್ಲ ಎಂದು ಪರಶುರಾಮ ಮಹಾರಾಜ ದೇವಸ್ಥಾನ ಕೋಟಾ ದಿಮೌ ಸಮಿತಿಯ ಅಧ್ಯಕ್ಷ ಜವಾಹರ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

ಮದುವೆಯ ಮೆರವಣಿಗೆಯು ಕೋಟಾ ದಿಮೌವನ್ನು ತಲುಪಿದಾಗ ಹಳ್ಳಿಯ ಹಿರಿಯರು ಅವರನ್ನು ಮೊದಲು ಸ್ವಾಗತಿಸುತ್ತಾರೆ ಮತ್ತು ಗ್ರಾಮದ ವ್ಯಾಪ್ತಿಯಲ್ಲಿ ಯಾರೂ ಮದ್ಯವನ್ನು ತರಬೇಡಿ ಎಂದು ಎಚ್ಚರಿಸುತ್ತಾರೆ ಎಂದು ಚೌಹಾಣ್ ಹೇಳಿದ್ದಾರೆ.

ಗ್ರಾಮದಿಂದ ದೂರದಲ್ಲೂ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿಲ್ಲ ಮತ್ತು ಈ ಸಂಬಂಧ ಸರ್ಕಾರ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸುತ್ತಮುತ್ತಲ ಗ್ರಾಮದಲ್ಲಿ ಅಕ್ರಮ ಮದ್ಯ ತಯಾರಿಕೆ ಕುರಿತು ಕೆಲ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಂತಹ ಯಾವುದೇ ಘಟನೆ ನಮ್ಮ ಗಮನಕ್ಕೆ ಬಂದರೆ, ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅಬಕಾರಿ ಆಯುಕ್ತ ಹರಿಶ್ಚಂದ್ರ ಸೆಮ್ವಾಲ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

SCROLL FOR NEXT