ದೇಶ

ಛತ್ತೀಸ್‌ಗಢ: ಶೂಟ್ ಮಾಡಿಕೊಂಡು ಬಿಎಸ್‌ಎಫ್ ಯೋಧ ಆತ್ಮಹತ್ಯೆಗೆ ಶರಣು

Lingaraj Badiger

ಕಂಕೇರ್: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆಯ(ಬಿಎಸ್‌ಎಫ್) 34 ವರ್ಷದ ಯೋಧನೊಬ್ಬ ತನ್ನ ಸರ್ವಿಸ್ ರೈಫಲ್‌ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ರಾಜಧಾನಿ ರಾಯ್‌ಪುರದಿಂದ ಸುಮಾರು 200 ಕಿಮೀ ದೂರದಲ್ಲಿರುವ ರೌಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಂಗಿಪಾಲ್ ಗ್ರಾಮದ ಬಿಎಸ್‌ಎಫ್ ಶಿಬಿರದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

"ಬಿಎಸ್‌ಎಫ್‌ನ 162ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಬಾಲ್ಮಿಕಿ ಸಿನ್ಹಾ ಅವರು ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿದ ಅವರ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು" ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತ ಯೋಧ ರಾಯ್‌ಪುರ ಜಿಲ್ಲೆಯ ಮಂದಿರ್ ಹಸೌದ್‌ನ ರಿವಾ ಗ್ರಾಮದವರು.

ಪ್ರಾಥಮಿಕ ಮಾಹಿತಿ ಪ್ರಕಾರ ಅವರ ಪತ್ನಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಹೀಗಾಗಿ ಎರಡು ತಿಂಗಳ ರಜೆಯ ನಂತರ ಅವರು ಕರ್ತವ್ಯಕ್ಕೆ ಮರಳಿದ್ದರು.

"ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಕಂಡುಬಂದಿಲ್ಲ ಮತ್ತು ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT