ದೇಶ

ಜಮ್ಮು ಮತ್ತು ಕಾಶ್ಮೀರ: ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಸಿಆರ್‌ಪಿಎಫ್ ಯೋಧ ಆತ್ಮಹತ್ಯೆ!

Ramyashree GN

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ (ಸಿಆರ್‌ಪಿಎಫ್) ಯೋಧ ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಬಿಹಾರದ ನಿವಾಸಿಯಾದ ಬಶಿತ್ ನಾರಾಯಣ ಯಾದವ್ ಅವರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬನಿಹಾಲ್-ಖಾಜಿಗುಂಡ್ ಸುರಂಗದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶನಿವಾರ ರಾತ್ರಿ 11.45ರ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೃತರ ಶವವನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾನೂನು ವಿಧಿವಿಧಾನಗಳಿಗಾಗಿ ಬನಿಹಾಲ್‌‌ನ ಉಪ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು.

ಆತ್ಮಹತ್ಯೆಯ ಹಿಂದಿನ ಕಾರಣವೇನೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಮಧ್ಯೆ, ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಕಾರ್ಯಾಚರಣೆ ವೇಳೆ ಆಕಸ್ಮಿಕವಾಗಿ ಸರ್ವೀಸ್ ರೈಫಲ್ ಫೈರ್ ಆಗಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

'ಗುಂಧಾ ಖಾವಾಸ್ ಪ್ರದೇಶದಲ್ಲಿ ದಿನನಿತ್ಯದ ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಯ ಸರ್ವಿಸ್ ರೈಫಲ್ ಆಕಸ್ಮಿಕವಾಗಿ ಫೈರಿಂಗ್ ಆಯಿತು. ಇದರಿಂದಾಗಿ ಸಿಬ್ಬಂದಿಯ ಪಾದಕ್ಕೆ ಗಾಯವಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಂಡೇಟಿನ ಶಬ್ದ ಕೇಳಿದ ಕೆಲವು ಗ್ರಾಮ ರಕ್ಷಣಾ ಸಿಬ್ಬಂದಿ ವೈಮಾನಿಕ ಗುಂಡು ಹಾರಿಸಿದರು. ಗಾಯಾಳು ಯೋಧನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

SCROLL FOR NEXT