ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮತ್ತೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಎದೆ ಭಾಗದ ಸೋಂಕಿನ ಸಮಸ್ಯೆಯಿಂದಾಗಿ ಕಾಂಗ್ರೆಸ್ ಸಂಸದೀಯ ಮಂಡಳಿಯ ಮುಖ್ಯಸ್ಥೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ವೈದ್ಯರ ತಂಡ ನಿಗಾ ಇರಿಸಿದ್ದು, ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಭಾನುವಾರ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಣ್ಣಗಿನ ಜ್ವರ ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅವರನ್ನು ಪರೀಕ್ಷೆ ನಡೆಸಿದ ವೈದ್ಯರು ಅವರಿಗೆ ಎದೆ ಭಾಗದ ಸೋಂಕಿನ ಸಮಸ್ಯೆ ಇರುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಮಾರ್ಚ್ ತಿಂಗಳಿನಲ್ಲಿಯೂ ಜ್ವರದ ಕಾರಣ ಸೋನಿಯಾ ಗಾಂಧಿ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿಯೇ ಅವರು ಸದಾ ಚಿಕಿತ್ಸೆಯನ್ನು ಪಡೆಯುತ್ತಾರೆ.
ಈ ವರ್ಷದ ಜನವರಿಯಲ್ಲಿ ಸೋನಿಯಾ ಗಾಂಧಿ ಉಸಿರಾಟದ ತೊಂದರೆಯ ಕಾರಣ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದಲ್ಲಿನ ವೈರಾಣು ಸೋಕಿನಿಂದ ಅವರು ಬಳಲುತ್ತಿದ್ದರು. ಆಗ ಆಸ್ಪತ್ರೆಯ ಡಾ. ಅನುಪ್ ಬಸು ತಂಡ ಸೋನಿಯಾ ಗಾಂಧಿಗೆ ಚಿಕಿತ್ಸೆ ನೀಡಿತ್ತು.