ದೇಶ

ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ, ಅಮೇಥಿಯಲ್ಲಿ ಸ್ಮೃತಿ ಇರಾನಿ ಠೇವಣಿ ಕಳೆದುಕೊಳ್ಳುತ್ತಾರೆ: ಯುಪಿ ಕಾಂಗ್ರೆಸ್ ಮುಖ್ಯಸ್ಥ

Ramyashree GN

ರಾಯಬರೇಲಿ: ಮುಂದಿನ ವರ್ಷ ಅಮೇಥಿ ಕ್ಷೇತ್ರದಿಂದ ಹಾಲಿ ಸಂಸದೆ ಸ್ಮೃತಿ ಇರಾನಿ ಅವರು ಠೇವಣಿ ಕಳೆದುಕೊಳ್ಳಲಿದ್ದು, ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಬುಧವಾರ ಹೇಳಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯಾದ ಅಮೇಥಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಯನ್ನು ಸೋಲಿಸುವ ಮೂಲಕ ಇರಾನಿ ಗೆಲುವು ಸಾಧಿಸಿದ್ದರು.

ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ರೈ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಅಮೇಥಿಯಲ್ಲಿ ಠೇವಣಿ ಕಳೆದುಕೊಳ್ಳಲಿದ್ದಾರೆ. ಬಿಜೆಪಿ ತನ್ನ ಸ್ವಂತ ಸಚಿವರ ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ಮೊದಲು ಗಮನಿಸಬೇಕು ಎಂದು ಹೇಳಿದರು. 

ಕಳೆದ ವಾರ ಲಖನೌನಲ್ಲಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಪುತ್ರ ವಿಕಾಸ್ ಕಿಶೋರ್ ಅವರ ಮನೆಯಲ್ಲಿ ನಡೆದ 30 ವರ್ಷದ ವ್ಯಕ್ತಿಯ ಹತ್ಯೆಯನ್ನು ಅವರು ಉಲ್ಲೇಖಿಸಿದ್ದಾರೆ.

'ಭಾರತೀಯ ಜನತಾ ಪಕ್ಷವು ಉತ್ತರ ಪ್ರದೇಶದ ಎಲ್ಲಾ 80 ಸ್ಥಾನಗಳನ್ನು ಗೆಲ್ಲುವುದನ್ನು ಮರೆತು ಬಿಡಬೇಕು. ಅಮೇಥಿ ಮತ್ತು ರಾಯಬರೇಲಿಯನ್ನು ಮರೆತುಬಿಡಬೇಕು. ಬಿಜೆಪಿಯವರೇ ಆದ ಸಚಿವ ಕೌಶಲ್ ಕಿಶೋರ್ ಅವರ ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು. ಅಲ್ಲಿ ಜೂಜಾಟ ನಡೆಯುತ್ತಿದೆ ಮತ್ತು ಬಿಜೆಪಿ ಕಾರ್ಯಕರ್ತನ ಕೊಲೆ ನಡೆದಿದೆ' ಎಂದು ರೈ ಹೇಳಿದರು.

ರಾಯಬರೇಲಿಯ ಜನರೊಂದಿಗೆ ತನಗೆ ಕೌಟುಂಬಿಕ ಸಂಬಂಧವಿದೆ ಎಂದು ಒತ್ತಿ ಹೇಳಿದ ರೈ, 'ನಮ್ಮ ನಾಯಕಿ ಸೋನಿಯಾ ಗಾಂಧಿ ಅವರು ಇಲ್ಲಿಂದ ಸಂಸದರಾಗಿದ್ದಾರೆ. ನಾನು ಅವರ ಪ್ರದೇಶಕ್ಕೆ ಬಂದಿದ್ದೇನೆ ಮತ್ತು ಅವರ ಬಲಿಷ್ಠ ಸೈನಿಕರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾವು ಪಕ್ಷದ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸುತ್ತಿದ್ದೇವೆ ಎಂದರು.

INDIA ಮತ್ತು BHARAT ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ, 'ವಿರೋಧ ಪಕ್ಷಗಳ ಮೈತ್ರಿಕೂಟದ ಹೆಸರು INDIA ಆಗಿರುವುದರಿಂದ ಅವರು ಅಸಮಾಧಾನಗೊಂಡಿದ್ದಾರೆ' ಎಂದು ರೈ ಹೇಳಿದರು.

SCROLL FOR NEXT